ದೆಹಲಿಯಲ್ಲಿ ವೈದ್ಯರು, ದಾದಿಯರು, ಆರೋಗ್ಯ ಸೇವಾನಿರತರಿಗೇ ಕೊರೋನಾ

ಕೊರೋನಾ ವಿರುದ್ಧದ ಹೋರಾಟದಲ್ಲಿ ದೆಹಲಿ ಸರ್ಕಾರ ಮತ್ತು ದೆಹಲಿಯ ವೈದ್ಯರ ಸೇವೆ ಶ್ಲಾಘನೀಯ. ಆದರೂ ದೆಹಲಿಯ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳೇ ಕೊರೋನಾ ವೈರಸ್ ಹರಡುವಿಕೆಯ ತಾಣಗಳಾಗಿ ಪರಿವರ್ತಿತವಾಗಿದೆ. 

Last Updated : Apr 27, 2020, 08:45 AM IST
ದೆಹಲಿಯಲ್ಲಿ ವೈದ್ಯರು, ದಾದಿಯರು, ಆರೋಗ್ಯ ಸೇವಾನಿರತರಿಗೇ ಕೊರೋನಾ title=

ನವದೆಹಲಿ: ಮಾರಕ ಕೊರೋನಾವನ್ನು ಕೊನೆಗಾಣಿಸಲು ಚಿಕಿತ್ಸೆ ನೀಡಬೇಕಾದ ದೆಹಲಿಯ ಆಸ್ಪತ್ರೆಗಳೇ ಕೊರೋನಾ ವೈರಸ್ ಹರಡುವ ತಾಣಗಳಾಗಿವೆ. ಕಿಲ್ಲರ್ ಕೊರೋನಾದ ಹುಟ್ಟಡಗಿಸಬೇಕಾದ ವೈದ್ಯರು, ದಾದಿಯರು ಮತ್ತು ಆರೋಗ್ಯ ಸೇವಾ ಸಿಬ್ಬಂದಿಗಳೇ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದು ರಾಷ್ಟ್ರ ರಾಜಧಾನಿ ದೆಹಲಿ ಆಸ್ಪತ್ರೆಗಳ ವಿಪರ್ಯಾಸದ, ವಿಚಿತ್ರವೆನಿಸುವ,‌ ವಿಷಮ ಪರಿಸ್ಥಿತಿಯಲ್ಲಿ ಕಂಡುಬರಬಾರದ,  ಮನಸ್ಸನ್ನು ವಿಚ್ಛಿದ್ರಗೊಳಿಸುವ ವಿಷಯ.

ಕೊರೋನಾ ವಿರುದ್ಧದ ಹೋರಾಟದಲ್ಲಿ ದೆಹಲಿ ಸರ್ಕಾರ ಮತ್ತು ದೆಹಲಿಯ ವೈದ್ಯರ ಸೇವೆ ಶ್ಲಾಘನೀಯ. ಆದರೂ ದೆಹಲಿಯ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳೇ ಕರೋನಾವೈರಸ್ (Coronavirus)  ಹರಡುವಿಕೆಯ ತಾಣಗಳಾಗಿ ಪರಿವರ್ತಿತವಾಗಿದೆ. ದೆಹಲಿಯ ವಿವಿಧ ಆಸ್ಪತ್ರೆಗಳ ಒಟ್ಟು 65 ಮಂದಿ ಆರೋಗ್ಯ ಸೇವಾ ಸಿಬ್ಬಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ.

ಅದರಲ್ಲೂ ನಿನ್ನೆ ಒಂದೇ ದಿನ ಆರೋಗ್ಯ ಸೇವೆಯ 51 ಜನರಿಗೆ ಕೊರೋನಾ ವೈರಸ್  ಕೋವಿಡ್-19 (Covid-19) ಇರುವುದು ದೃಢವಾಗಿದೆ‌. ಅದರಲ್ಲಿ ರೋಹಿಣಿಯಲ್ಲಿರುವ ಅಂಬೇಡ್ಕರ್ ಆಸ್ಪತ್ರೆಯದ್ದೇ ಅತಿ ಹೆಚ್ಚು. ಅಲ್ಲಿನ 32 ಮಂದಿ ಆರೋಗ್ಯ ಸೇವಾನಿರತರಿಗೆ ಕೊರೋನಾ ಕಾಣಿಸಿಕೊಂಡಿದೆ. 

COVID-19: ದೆಹಲಿಯಲ್ಲಿ 12 ಹೊಸ ರೆಡ್ ಜೋನ್, ಇಲ್ಲಿದೆ ಪೂರ್ಣ ಪಟ್ಟಿ

ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ಪೀಡಿತ ಗರ್ಭಿಣಿಯೊಬ್ಬರು ಮೃತಪಟ್ಟಿದ್ದರು. ಅವರಿಂದಲೇ ವೈದ್ಯರು, ದಾದಿಯರು ಮತ್ತು  ಸಿಬ್ಬಂದಿಗೂ ಕೊರೋನಾ ಹರಡಿರಬಹುದು ಎಂದು ಅಂಬೇಡ್ಕರ್ ಆಸ್ಪತ್ರೆ ಅಭಿಪ್ರಾಯಪಟ್ಟಿದೆ.

ನಂತರದ ಸ್ಥಾನ ಜಗಜೀವನರಾಮ್ ಆಸ್ಪತ್ರೆಯದ್ದಾಗಿದೆ. ಅಲ್ಲಿನ 19 ದಾದಿಯರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅಲ್ಲದೆ ಪ್ರತಿಷ್ಠಿತ ಎಮ್ಸ್ ಆಸ್ಪತ್ರೆಯ ನರ್ಸ್ ಮತ್ತು ಅವರ ಇಬ್ಬರು ಮಕ್ಕಳಲ್ಲೂ ಕೊರೋನಾ ಕಂಡುಬಂದಿದೆ.

ಆಂಧ್ರ ರಾಜಭವನದ ನಾಲ್ವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್

ಇದಲ್ಲದೆ ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಮಹಾಮಾರಿ‌ ಕೊರೋನಾವೈರಸ್ ಭಾರತಕ್ಕೆ ಕಾಲಿಟ್ಟಾಗಿನಿಂದ ದಿನವೊಂದರಲ್ಲಿ ಅತಿ ಹೆಚ್ಚು ಜನರಲ್ಲಿ ಸೋಂಕು ಕಂಡುಬಂದ ದಾಖಲೆ ನಿನ್ನೆಯಾಗಿದೆ. ನಿನ್ನೆ ಒಂದೇ ದಿನ ಭಾರತದಲ್ಲಿ 1.975 ಜನರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಜನ್ಮತೆಳೆದ ಮಾರಕ‌ ಕೊರೋನಾ ವೈರಸ್ ಭಾರತಕ್ಕೆ ಕಾಲಿಟಿದ್ದು ಈ ವರ್ಷದ ಜನವರಿ 30ರಂದು. ಅಂದು ಕೇರಳದಲ್ಲಿ ಮೊದಲ ಪ್ರಕರಣ ಕಂಡುಬಂದಿತ್ತು. ಅಂದಿನಿಂದ ನಿನ್ನೆಯವರೆಗೆ ಕೊರೋನಾ ವೈರಸ್ ಹರಡಿದ ಮಾಹಿತಿ ನೋಡಿದರೆ ದಿನವೊಂದರಲ್ಲಿ ಅತಿ ಹೆಚ್ಚು ಹರಡಿದ್ದು ನಿನ್ನೆಯೇ. ನಿನ್ನೆ ಒಂದೇ ದಿನ 1,975 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಇದರಿಂದ ನಿನ್ನೆ ಸಂಜೆ 5ಗಂಟೆವರೆಗಿನ ದೇಶದ ಕೊರೋನಾ ಪೀಡಿತರ ಸಂಖ್ಯೆ 26,917ಕ್ಕೆ ಏರಿಕೆಯಾಗಿದೆ‌. ಆ ಪೈಕಿ 5.913 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಉಳಿದಂತೆ ದೇಶಾದ್ಯಂತ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 826ಕ್ಕೆ ಏರಿಕೆಯಾಗಿದೆ.
 

Trending News