ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರಾಫೆಲ್ ಡೀಲ್ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸಂಸದೀಯ ಸಮಿತಿ ರಚನೆ ಮಾಡುವಂತೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
ಇಂದಿಲ್ಲಿ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಬೊಫೋರ್ಸ್ ಹಗರಣದಲ್ಲಿ ತನಿಖೆ ನಡೆಸಿದಂತೆಯೇ, ರಾಫೆಲ್ ಜೆಟ್ ಒಪ್ಪಂದದ ಬಗ್ಗೆಯೂ ತನಿಖೆ ನಡೆಸಲು ಸಂಸತ್ತಿನ ಜಂಟಿ ಸಮಿತಿ ರಚಿಸಬೇಕು. ಒಂದು ವೇಳೆ ಯುದ್ಧ ವಿಮಾನಗಳು ಅಗ್ಗದ ದರವನ್ನು ಹೊಂದಿದ್ದೇ ಆಗಿದ್ದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಪ್ರಧಾನಿ ಮೋದಿ ಅವರು ಅದನ್ನು ಹೇಳಬೇಕಿತ್ತು" ಎಂದಿದ್ದಾರೆ.
A Parliament Joint Committee should be made, as it was done in Bofors case, to state facts of Rafale Deal. If it is cheaper, then PM should have stated it during #NoConfidenceMotion. Now statements by BJP are just afterthoughts to mask corruption: Mallikarjun Kharge, Congress pic.twitter.com/kiCAJpWrgF
— ANI (@ANI) July 25, 2018
ಅಷ್ಟೇ ಅಲ್ಲದೆ, ಆಡಳಿತ ಪಕ್ಷ ಬಿಜೆಪಿ ಈ ಒಪ್ಪಂದದ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ ಖರ್ಗೆ, "ಇದುವೆರೆಗೂ ರಾಫೆಲ್ ಒಪ್ಪಂದದ ಬಗ್ಗೆ ಬಿಜೆಪಿ ನೀಡಿರುವ ಹೇಳಿಕೆಗಳು ಕೇವಲ ಭ್ರಷ್ಟಾಚಾರವನ್ನು ಮರೆಮಾಚಲು ನೀಡಿರುವ ಹೇಳಿಕೆಗಳಾಗಿವೆ" ಎಂದು ಕಿಡಿ ಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವನ್ನು ಕಟುವಾಗಿ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ, ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 5 ದಿನಗಳ ವಿದೇಶ ಪ್ರವಾಸ ತೆರಳಿದ್ದಾರೆ. ವಿದೇಶದಲ್ಲಿ ನಡೆಯುತ್ತಿರುವ ಸಭೆಗಳೇನು ಅನಿವಾರ್ಯವಾದುವಲ್ಲ ಅಥ್ವಾ ಆಹ್ವಾನಿತ ಸಭೆಗಳಲ್ಲ. ಅವುಗಳನ್ನು ಮುಂದೂಡಬಹುದಿತ್ತು. ಬಹುಮತ ಇದೆ ಎಂದ ಮಾತ್ರಕ್ಕೆ ಅಧಿವೇಶನವನ್ನು ನಿರ್ಲಕ್ಷಿಸಿ, ವಿದೇಶ ಪ್ರವಾಸ ಕೈಗೊಂಡಿರುವುದು ಸರಿಯಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದ್ದು, ವೀರಪ್ಪ ಮೋಯ್ಲಿ, ಕೆವಿ ಥಾಮಸ್, ಜ್ಯೋತಿರಾದಿತ್ಯ ಸಿಂಧಿಯಾ, ರಾಜೀವ್ ಸತವ್ ನಿಲುವಳಿ ಸೂಚನೆಯನ್ನು ಬೆಂಬಲಿಸಿದ್ದಾರೆ.