ಭೂಪಾಲ್: ಮಧ್ಯಪ್ರದೇಶದಲ್ಲಿ ಈಗ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸತತ ನಾಲ್ಕನೇ ಬಾರಿಗೆ ಅಧಿಕಾರದ ಕನಸನ್ನು ಬಿಜೆಪಿ ಕಾಣುತ್ತಿದೆ.ಈಗ ಇದನ್ನು ಸಾಕಾರಗೊಳಿಸಲು ಬಿಜೆಪಿ ಈಗ ಜಾದುಗಾರರಿಗೆ ಮೊರೆಹೊಗಿದೆ.
ಅಷ್ಟಕ್ಕೂ ಬಿಜೆಪಿ ಈಗ ಜಾದುಗಾರರ ಮೂಲಕ ಮಾಡಹೊರಟಿದ್ದಾದರೂ ಏನು ಅಂತೀರಾ? ಹೌದು, ಈಗ ಬಿಜೆಪಿ ತನ್ನ ಈ ಹಿಂದಿನ ಮೂರು ಅವಧಿಯಲ್ಲಿ ಮಾಡಿದ ಸಾಧನೆ ಮತ್ತು ಕಾಂಗ್ರೆಸ್ ಕಾಲಾವಧಿಯಲ್ಲಿ ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈಗ ರಾಜ್ಯದಲ್ಲಿ ಜಾದುಗಾರರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಈ ಕುರಿತಾಗಿ ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಬಿಜೆಪಿ ವಕ್ತಾರ ರಜನೀಶ್ ಅಗರವಾಲ್ " ನಾವು ಈಗ ಪ್ರಚಾರಕ್ಕಾಗಿ ಜಾದುಗಾರರನ್ನು ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ. ಪ್ರಮುಖವಾಗಿ ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶದಲ್ಲಿ ಮತದಾರರನ್ನು ತಲುಪುವ ನಿಟ್ಟಿನಲ್ಲಿ ಬಿಜೆಪಿ ಮಾರುಕಟ್ಟೆಯ ಪ್ರದೇಶಗಳಲ್ಲಿ ಮ್ಯಾಜಿಕ್ ಷೋ ಗಳನ್ನು ನಡೆಸಲಿದೆ. ಆದರೆ ಈ ಕಾರ್ಯಕ್ಕೆ ಜಾದುಗಾರರ ಸಂಖ್ಯೆಯನ್ನು ಇನ್ನು ನಿರ್ಧಿಷ್ಟಗೊಳಿಸಬೇಕಾಗಿದೆ ಎಂದು ಬಿಜೆಪಿ ವಕ್ತಾರ ತಿಳಿಸಿದ್ದಾರೆ.
ಇದೇ ವೇಳೆ 1993 ಮತ್ತು 2003 ರ ನಡುವೆ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ 10 ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ರಸ್ತೆಗಳು, ವಿದ್ಯುತ್ ಪೂರೈಕೆ ಮತ್ತು ಮೂಲ ಸೌಕರ್ಯಗಳ ಕಳಪೆ ಸ್ಥಿತಿಯನ್ನು ಸಹ ಜಾದೂ ಪ್ರದರ್ಶನಗಳು ತೋರಿಸುತ್ತವೆ ಎಂದು ಹೇಳಿದರು.