ಲಾಕ್​ಡೌನ್ ವಿಸ್ತರಣೆ ಬಗ್ಗೆ ಸಿಎಂಗಳ ಜೊತೆ ಮೋದಿ ಬದಲು ಅಮಿತ್ ಶಾ ಚರ್ಚೆ

ಮೇ 31ಕ್ಕೆ ಲಾಕ್​ಡೌನ್  ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಎಲ್ಲಾ‌ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಅಮಿತ್ ಶಾ ಲಾಕ್​ಡೌನ್  ಬಗ್ಗೆ ಮುಖ್ಯಮಂತ್ರಿಗಳ ಅಭಿಪ್ರಾಯ ಸಂಗ್ರಹಿಸಿದರು.‌ 

Written by - Yashaswini V | Last Updated : May 29, 2020, 07:15 AM IST
ಲಾಕ್​ಡೌನ್ ವಿಸ್ತರಣೆ ಬಗ್ಗೆ ಸಿಎಂಗಳ ಜೊತೆ ಮೋದಿ ಬದಲು ಅಮಿತ್ ಶಾ ಚರ್ಚೆ title=

ನವದೆಹಲಿ: ನಾಲ್ಕನೇ ಹಂತದ ಲಾಕ್​ಡೌನ್  ಮೇ 31ಕ್ಕೆ ಕೊನೆಯಾಗಲಿದೆ. ಮೇ 31ರಂದು ಪಧಾನಿ ನರೇಂದ್ರ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಉದ್ದೇಶಿಸಿ ಭಾಷಣ ಮಾಡುವಾಗ ಐದನೇ ಹಂತದ ಲಾಕ್​ಡೌನ್ (Lockdown)  ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ‌ ಸಚಿವ ಅಮಿತ್ ಶಾ (Amit Shah) ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಮಾರ್ಚ್ 24ರಂದು ಮೊದಲ ಲಾಕ್​ಡೌನ್  ಘೊಷಿಸುವಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಯಾರನ್ನೂ ಕೇಳದೆ ನಿರ್ಧಾರ ಮಾಡಿದ್ದರು. ಬಳಿಕ ಎಲ್ಲಾ ಸಂದರ್ಭದಲ್ಲೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದರು.‌ ಆದರೆ ಈ ಬಾರಿ ಕೇಂದ್ರ ಗೃಹ‌ ಸಚಿವ ಅಮಿತ್ ಶಾ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ.

ಮೇ 31ಕ್ಕೆ ಲಾಕ್​ಡೌನ್  ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಎಲ್ಲಾ‌ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಅಮಿತ್ ಶಾ ಲಾಕ್​ಡೌನ್  ಬಗ್ಗೆ ಮುಖ್ಯಮಂತ್ರಿಗಳ ಅಭಿಪ್ರಾಯ ಸಂಗ್ರಹಿಸಿದರು.‌ ನಾಲ್ಕನೇ ಹಂತದ ಲಾಕ್​ಡೌನ್ ಮುಕ್ತಾಯವಾಗುವ ಮೇ 31ರ ಬಳಿಕ ಯಾವ ರೀತಿಯ ಕಾರ್ಯತಂತ್ರ ಇರಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳ ವಲಯದಿಂದ ತಿಳಿದುಬಂದಿದೆ.

ಮೇ 31ರ ಬಳಿಕ‌ ಜಾರಿಯಾಗಲಿರುವ 5ನೇ ಹಂತದ ಲಾಕ್​ಡೌನ್ ಹೇಗಿರಲಿದೆ ಗೊತ್ತಾ?

ಒಂದೆಡೆ ಮುಖ್ಯಮಂತ್ರಿಗಳಿಂದ ಅಮಿತ್ ಶಾ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇನ್ನೊಂದೆಡೆ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ದೇಶದ 13 ನಗರಗಳ ನಗರಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ.

ದೇಶದ  ಕೋವಿಡ್ -19 (Covid-19)  ಪೀಡಿತರ ಒಟ್ಟು ಸಂಖ್ಯೆಯಲ್ಲಿ ಈ 17 ಮಹಾನಗರಗಳ ಪ್ರಮಾಣ ಶೇಕಡಾ ‌70ಕ್ಕಿಂತಲೂ‌ ಹೆಚ್ಚು. ಆದುದರಿಂದ ಐದನೇ ಹಂತದ ಲಾಕ್ಡೌನ್ ಈ ನಗರಗಳನ್ನು ಗುರಿಯಾಗಿರಿಸಿಕೊಂಡೇ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಈ ನಗರಗಳ ನಗರಪಾಲಿಕೆ, ಮಹಾನಗರ ಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಜೊತೆ ಮಾತ್ರ ಚರ್ಚಿಸಲಾಗಿದೆ. 

ಇದಲ್ಲದೆ ಪ್ರತ್ಯೇಕವಾಗಿ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೊಂದಿಗೂ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ ಅಂತಿಮವಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

Trending News