ನವದೆಹಲಿ: ಇ-ಕಾಮರ್ಸ್ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಅಮೆಜಾನ್ ಇಂಡಿಯಾ, ಭಾರತದಲ್ಲಿ 20 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಿದೆ ಎಂದು ಭಾನುವಾರ ತಿಳಿಸಿದೆ. ಈ ವ್ಯಾಕೆನ್ಸಿ ಗಳು ಕಂಪನಿಯ ಗ್ರಾಹಕ ಸೇವೆ (ಸಿಎಸ್) ವಿಭಾಗದಲ್ಲಿರಲಿದ್ದು, ನೇಮಕಗೊಂಡ ಜನರು ಭಾರತ ಮತ್ತು ವಿಶ್ವದಾದ್ಯಂತದ ಗ್ರಾಹಕರಿಗೆ ತಮ್ಮ ಶಾಪಿಂಗ್ ಅನುಭವವನ್ನು ಸುಧಾರಿಸಲು ಸಹಾಯ ಮಾಡಲಿದ್ದಾರೆ. ಆದರೆ ಈ ನೆಮಕಾತಿಗಳು ಪ್ರಸ್ತುತ ಕೇವಲ ತಾತ್ಕಾಲಿಕ ನೇಮಕಾತಿಗಳಾಗಿರಲಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಮುಂದಿನ ಆರು ತಿಂಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಈ ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ತಾತ್ಕಾಲಿಕ ಉದ್ಯೋಗಿಗಳ ನೇಮಕಾತಿ ನೋಯ್ಡಾ, ಕೋಲ್ಕತಾ, ಜೈಪುರ, ಚಂಡೀಗಢ, ಇಂದೋರ್, ಭೋಪಾಲ್, ಲಕ್ನೋ, ಹೈದರಾಬಾದ್, ಪುಣೆ, ಕೊಯಮತ್ತೂರು, ಮಂಗಳೂರಿಗೆ ಸೀಮಿತವಾಗಿರಲಿವೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ ಈ ನೇಮಕಾತಿಗಳು ಅಮೆಜಾನ್ ನ ವರ್ಚ್ಯುವಲ್ ಕಸ್ಟಮರ್ ಕೇರ್ ಕಾರ್ಯಕ್ರಮದಡಿ ಇರಲಿವೆ ಎಂದು ಹೇಳಿದ್ದು, ಇದರಲ್ಲಿ ವರ್ಕ್ ಫ್ರಮ್ ಹೋಮ್ ಸೌಲಭ್ಯ ಕೂಡ ಇರಲಿದೆ ಎಂದು ಹೇಳಿದೆ. ಈ ಹುದ್ದೆಗಳಿಗೆ ಸೇರಿದ ಜನರು ಇ-ಮೇಲ್, ಚ್ಯಾಟ್, ಸೋಸಿಯಲ್ ಮೀಡಿಯಾ ಹಾಗೂ ಫೋನ್ ಗಳ ಮೂಲಕ ಗ್ರಾಹಕರಿಗೆ ಸಹಾಯ ಮಾಡಲಿದ್ದಾರೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 12 ನೇ ತರಗತಿ ಪಾಸಾಗಿರಬೇಕು. ಜೊತೆಗೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಅಥವಾ ಕನ್ನಡ ಭಾಷೆಗಳ ಮೇಲೆ ಪ್ರಭುತ್ವ ಹೊಂದಿರಬೇಕು.
ಈ ಕುರಿತು ಹೇಳಿರುವ ಅಮೆಜಾನ್ ಇಂಡಿಯಾ, ಅಭ್ಯರ್ಥಿಗಳ ಪ್ರದರ್ಶನ ಹಾಗೂ ವ್ಯಾಪಾರದ ಅಗತ್ಯತೆಗಳಿಗೆ ಅನುಗುಣವಾಗಿ ವರ್ಷದ ಅಂತ್ಯಕ್ಕೆ ಹಲವರನ್ನು ಪರ್ಮನೆಂಟ್ ಮಾಡಲಾಗುವುದು . ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಮೆಜಾನ್ ಇಂಡಿಯಾ ನಿರ್ದೇಶಕ (ಕಸ್ಟಮರ್ ಕೇರ್ ವಿಭಾಗ), "ಗ್ರಾಹಕರಿಂದ ನಿರಂತರ ಹೆಚ್ಚಾಗುತ್ತಿರುವ ಬೇಡಿಕೆಯಿಂದ ನಾವು ಕಸ್ಟಮರ್ ಕೇರ್ ಆರ್ಗನೈಸೆಶನ್ ನಲ್ಲಿ ನಿರಂತರ ಭರ್ತಿಯ ಅಗತ್ಯತೆಗಳ ಸಮೀಕ್ಷೆ ನಡೆಸುತ್ತಿದ್ದೇವೆ. ಮುಂಬರುವ ಆರು ತಿಂಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು, ಭಾರತ ಮತ್ತು ವಿಶ್ವದಲ್ಲಿ ಹಬ್ಬಗಳ ಸುಗ್ಗಿಯೇ ಆರಂಭವಾಗಲಿದೆ" ಎಂದಿದ್ದಾರೆ.
"ಕೊವಿಡ್ ಸಾಂಕ್ರಾಮಿಕದ ಕಾಲದಲ್ಲಿ ಇದರಿಂದ ಅಭ್ಯರ್ಥಿಗಳಿಗೆ ಜಾಬ್ ಸೆಕ್ಯೂರಿಟಿ ಹಾಗೂ ಜೀವನೋಪಾಯ ಸಿಗಲಿದೆ" ಎಂದೂ ಕೂಡ ಅವರು ಹೇಳಿದ್ದಾರೆ. ಇದೇ ವರ್ಷದ ಆರಂಭದಲ್ಲಿ ಅಮೆಜಾನ್ 2025ರವರೆಗೆ ಭಾರತದಲ್ಲಿ ಸುಮಾರು 10 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ ಎಂದು ಹೇಳಿತ್ತು. ಇದಕ್ಕಾಗಿ ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ಲಾಜಿಸ್ಟಿಕ್ಸ್ ನಲ್ಲಿ ಹೂಡಿಕೆಯನ್ನು ಹೆಚ್ಚಿಸಲಾಗುವುದು ಎಂದು ಕಂಪನಿ ಹೇಳಿತ್ತು.