ನವದೆಹಲಿ: 2019 ರ ಲೋಕಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗವು ಪ್ರಕಟಿಸಿದ್ದು, ಏಪ್ರಿಲ್ 11 ರಿಂದ ಚುನಾವಣೆ ಆರಂಭವಾಗಲಿದೆ. ಒಟ್ಟು 7 ಹಂತಗಳಲ್ಲಿ ನಡೆಯುವ ಚುನಾವಣೆಯು ಮೇ 19ರಂದು ಕೊನೆಗೊಳ್ಳಲಿದ್ದು ಮೇ 23 ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪೂರ್ವ ಉತ್ತರ ಪ್ರದೇಶದ ಅಜಂಘರ್ ದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಭಾರೀ ಕುತೂಹಲ ಮೂಡಿಸಿದೆ.
ಪಕ್ಷದ ವರದಿಗಳ ಪ್ರಕಾರ, ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಅಜಂಘರ್ ಲೋಕಸಭಾ ಕ್ಷೇತ್ರದಿಂದ ಪೂರ್ವಾಂಚಲ ರಾಜಕೀಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ, ಎಸ್ಪಿ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಪೂರ್ವ ಉತ್ತರ ಪ್ರದೇಶದ ಅಜಂಘರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ್ದ ಮುಲಾಯಂ ಸಿಂಗ್ ಯಾದವ್, ನಾವೆಲ್ಲರೂ ನರೇಂದ್ರ ಮ್ದೊಇ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಬಯಸುತ್ತೇವೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಎಲ್ಲಾ ಲೋಕಸಭಾ ಸದಸ್ಯರೂ ಮತ್ತೊಮ್ಮೆ ಆಯ್ಕೆಯಾಗಬೇಕು ಎಂದು ಬಯಸುತ್ತೇನೆ ಎಂದೂ ಸಹ ಆಶಿಸಿದ್ದರು.
ಮೂಲಗಳ ಪ್ರಕಾರ, ಅಖಿಲೇಶ್ ಯಾದವ್ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ಇತಿಹಾಸದ ಮೇಲೆ ಹೊಸ ಛಾಪು ಒತ್ತುವ ಆಲೋಚನೆಯಲ್ಲಿದ್ದರು. ಆದರೆ, ಮುಲಾಯಂ ಸಿಂಗ್ ಯಾದವ್ ಮೈನ್ಪುರಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ಬಳಿಕ ಈ ಕ್ಷೇತ್ರದಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ. 2014 ರಲ್ಲಿ, ಮುಲಾಯಂ ಕೂಡ ಅಜಂಘರ್ ಮತ್ತು ಮೈನ್ಪುರಿ ಎರಡೂ ಕ್ಷೇತ್ರಗಳಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಮುಲಾಯಂ ಅವರು ಅಜಂಘರ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮೈನ್ಪುರಿ ಕ್ಷೇತ್ರವನ್ನು ಬಿಟ್ಟಿದ್ದರು. ಸದ್ಯ ಸಮಾಜವಾದಿ ಪಕ್ಷವು ಲೋಕಸಭೆ ಚುನಾವಣೆಗೆ 9 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ.