ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ 7 ಸ್ಥಾನಗಳಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ನ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದರು. ರಾಹುಲ್ ಗಾಂಧಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್, ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಜಯ್ ಮಾಕನ್ ಸೇರಿದಂತೆ ದೆಹಲಿಯ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು. ಸಭೆಯ ಬಳಿಕ ಮಾತನಾಡಿದ ಶೀಲಾ ದೀಕ್ಷಿತ್, 'ದೆಹಲಿಯಲ್ಲಿ ಎಎಪಿ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳದೇ ಇರಲು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಗಿದೆ' ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಗಾಗಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕೆ ಆರು ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷ ತನ್ನ ಅಭ್ಯರ್ಥಿಗಳ ಹೆಸರನ್ನು ಶನಿವಾರ ಪ್ರಕಟಿಸಿದೆ. ಆದರೆ ಇದು ಕಾಂಗ್ರೆಸ್ನ ಒತ್ತಡದ ರಾಜಕೀಯವೆಂದು ಪರಿಗಣಿಸಲ್ಪಟ್ಟಿದೆ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ 3-3 ಸ್ಥಾನಗಳ ಹಂಚಿಕೆ ಸೂತ್ರದ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ನಂಬಲಾಗಿತ್ತು. ಯಶ್ವಂತ್ ಸಿನ್ಹಾ ಅಥವಾ ಶತ್ರುಘ್ನ ಸಿನ್ಹಾಗೆ ಒಂದು ಸೀಟನ್ನು ನೀಡುವ ಬಗ್ಗೆ ಮಾತನಾಡಲಾಗಿತ್ತು.
ಮೂಲಗಳ ಪ್ರಕಾರ, ಆಮ್ ಆದ್ಮಿ ಪಕ್ಷವು 7 ಲೋಕಸಭಾ ಕ್ಷೇತ್ರಗಳಲ್ಲಿ 2 ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡಲು ಬಯಸಿದೆ. ಆದರೆ ಕಾಂಗ್ರೆಸ್ 3 ಸ್ಥಾನಗಳಿಗಾಗಿ ಪಟ್ಟು ಹಿಡಿದಿದೆ. ಅದಕ್ಕಾಗಿಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ದೆಹಲಿಯ ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.
ಲೋಕಸಭೆ ಚುನಾವಣೆಗೆ ಎಎಪಿ ಸಿದ್ಧತೆ, ದೆಹಲಿಯ 6 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ:
2019 ರ ಲೋಕಸಭೆ ಚುನಾವಣೆಗಾಗಿ ಕಾತುರದಿಂದ ಕಾಯುತ್ತಿರುವ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಶನಿವಾರ ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಬಿಡುಗಡೆ ಮಾಡಿದ ಪಟ್ಟಿಯಲ್ಲಿ, ಪೂರ್ವ ದೆಹಲಿಯಿಂದ ಅತೀಶಿ, ನೈಋತ್ಯ ದೆಹಲಿಯಿಂದ ಗುಗ್ಗಾನ್ ಸಿಂಗ್ ರಂಗ, ದಕ್ಷಿಣ ದೆಹಲಿಯ ರಾಘವ್ ಚಾಧ, ಈಶಾನ್ಯ ದೆಹಲಿಯಿಂದ ದಿಲೀಪ್ ಪಾಂಡೆ, ಚಾಂದನಿ ಚೌಕದಿಂದ ಪಂಕಜ್ ಗುಪ್ತಾ ಮತ್ತು ನವ ದೆಹಲಿ ಕ್ಷೇತ್ರದಿಂದ ಬ್ರಿಜೆಶ್ ಗೋಯಲ್ ಅವರ ಹೆಸರನ್ನು ಘೋಷಿಸಲಾಗಿದೆ. ವೆಸ್ಟ್ ದೆಹಲಿಯ ಅಭ್ಯರ್ಥಿಯ ಹೆಸರನ್ನು ಇನ್ನೂ ಘೋಷಿಸಿಲ್ಲ.