ನಾಗಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ 80 ವರ್ಷದ ಅಜ್ಜಿ ಕಳ್ಳತನ ಮಾಡಲು ಮನೆಗೆ ಬಂದಿದ್ದ ವ್ಯಕ್ತಿಗೆ ತಕ್ಕ ಪಾಠ ಕಲಿಸಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ನಾಗಪುರದ ಇಂದ್ರಪ್ರಸ್ಥ ನಗರದ ನಿವಾಸಿ ಸತ್ಯಭಾಮ ಖವ್ಸೆ ಅವರೇ ಈ ಸಾಹಸಿ ಅಜ್ಜಿ.
ನಾಗ್ಪುರ್ನ ಇಂದ್ರಪ್ರಸ್ಥ ನಗರದ ಬಾಬಡೆ ಲೇ ಔಟ್ ನಲ್ಲಿ ಸತ್ಯಭಾಮ ಅವರ ಕುಟುಂಬ ವಾಸವಿದೆ. ಮೇ 27ರಂದು ಮಧ್ಯಾಹ್ನ 02.30ರ ವೇಳೆಗೆ ಈ ಅಜ್ಜಿ ತಮ್ಮ ಮನೆಯ ಹಾಲಿನಲ್ಲಿ ಮಲಗಿದ್ದರು. ಅವರ ಮನೆ ಬಾಗಿಲು ತೆರೆದಿತ್ತು. ಆ ವೇಳೆ ವ್ಯಕ್ತಿಯೊಬ್ಬ ಮನೆಯ ಕಾಂಪೌಂಡ್ ಎಗರಿ ಮನೆ ಪ್ರವೇಶಿಸಿ, ಮಲಗಿದ್ದ ಅಜ್ಜಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದಿಯಲು ಹೋಗಿ ಅಜ್ಜಿಯ ಕೈಗೆ ಸಿಕ್ಕಿಬಿದ್ದಿದ್ದಾನೆ.
"ನಾನು ನಿದ್ರಿಸುತ್ತಿದ್ದೆ, ಇದ್ದಕ್ಕಿದ್ದಂತೆ ನಾನು ನಿದ್ದೆಯಿಂದ ಎದ್ದೆ, ತಕ್ಷಣ ಯಾರೋ ನನ್ನ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕದಿಯಲು ಪ್ರಯತ್ನಿಸುತ್ತಿದ್ದ, ನಾನು ತಕ್ಷಣ ಆ ವ್ಯಕ್ತಿಯ ಶರ್ಟ್ ಕಾಲರ್ ಹಿಡಿದೆ. ನಂತರ ಸಹಾಯಕ್ಕಾಗಿ ನನ್ನ ಮಗ ದೇವಿದಾಸ್ ಓಡಿಬಂದರು. ಸದ್ದು ಕೇಳಿದೊಡನೆ ಅಕ್ಕ-ಪಕ್ಕದವರೂ ಓಡಿ ಬಂದರು. ಎಲ್ಲರೂ ಒಟ್ಟಿಗೆ ಸೇರಿ ಕಳ್ಳನನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು" ಎಂದು ಸತ್ಯಭಾಮ ಹೇಳಿದರು.
ಪೊಲೀಸರಿಗೆ ಹಸ್ತಾಂತರಿಸಲಾಗಿರುವ ಕಳ್ಳನನ್ನು ಪ್ರದೀಪ್ ಕರದಂ ಎಂದು ಗುರುತಿಸಲಾಗಿದೆ. ನಾಗ್ಪುರ MIDC ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾದ ಹಲವು ಪ್ರಕರಣಗಳಲ್ಲಿ ಆತನ ಹೆಸರಿದೆ ಎಂದು ಎಂಐಡಿಸಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಹುಲ್ ಶೆಜಾ ಹೇಳಿದ್ದಾರೆ.