ಮಂಡಿ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಜೀಪೊಂದು ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಮೃತಪಟ್ಟು ಇತರ ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಂಡಿ ಜಿಲ್ಲೆಯ ಫಗ್ನಿ ಗ್ರಾಮದ ಪಧಾರ್ ಪ್ರದೇಶದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಬಲ್ಪೋರಾ ಗ್ರಾಮದಿಂದ ಪಧಾರ್ ಗ್ರಾಮದ ಮಾರ್ಗ ಮಧ್ಯೆ ಜೀಪ್ ಚಾಲಕ ನಿಯಂತ್ರಣ ಕಳೆದುಕೊಂಡ ಕಾರಣ ಘಗ್ನಿ ಗ್ರಾಮದ ಬಳಿಯಿರುವ ಜೋಗ್ನಿ ಮಾತಾ ದೇವಸ್ಥಾನದ ಹತ್ತಿರದ ಪ್ರಪಾತಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ.
ಕೂಡಲೇ ಸ್ಥಳಿಯರು ಆಗಮಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಮೃತರನ್ನು ರಾಮ್(60), ರೂಪ್ ಲಾಲ್(48), ಜೆಥಿ ದೇವಿ(45), ಶಿವಾನಿ(14), ಶಕ್ತಿ ದೇವಿ(45) ಎಂದು ಗುರುತಿಸಲಾಗಿದ್ದು, ಅನಿತಾ, ಉರ್ಮಿಳಾ, ಸೋನಿ ದೇವಿ, ಮೋಹನ ಸಿಂಗ್, ಕುಶಾಲ್ ಮತ್ತು ಚಾಲಕ ಪವನ್ ಕುಮಾರ್ ಗಾಯಗೊಂಡವರಾಗಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.