EXCLUSIVE: ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಯಾವುದೇ ತ್ಯಾಗಕ್ಕೂ ಸಿದ್ಧ - ಜೈರಾಮ್ ರಮೇಶ್

"ಕರ್ನಾಟಕದ ಚುನಾವಣೆಯ ನಂತರ ರಾಹುಲ್ ಗಾಂಧಿಯವರ ತುರ್ತು ನಿರ್ಧಾರಗಳು ಕೆಲವೊಮ್ಮೆ ಕಾಂಗ್ರೆಸ್ ನಲ್ಲಿ ಅಚ್ಚರಿಯನ್ನು ಉಂಟು ಮಾಡಿದ್ದವು. ಈ ಬಾರಿ ಇಡೀ ದೇಶದಲ್ಲೆಡೆ  ಕಾಂಗ್ರೆಸ್ ಪಕ್ಷವು ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಸಹಿತ ಮಹಾಮೈತ್ರಿ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ."

Last Updated : Jun 4, 2018, 06:00 PM IST
  • ಮೋದಿ ಜಗತ್ತಿನ ಉತ್ತಮ ಮಾತುಗಾರ, ಮಾತುಗಾರಿಕೆಯಲ್ಲಿ ಅವರು ಪರಿಣಿತಿ ಪಡೆದಿದ್ದಾರೆ.
  • ಮೋದಿಯವರನ್ನು ಅಧಿಕಾರದಿಂದ ಹೊರಹಾಕಲು ಕಾಂಗ್ರೆಸ್ ಯಾವುದೇ ತ್ಯಾಗಕ್ಕೂ ಸಿದ್ದ.
  • 15 ಲಕ್ಷ ರೂಪಾಯಿ ನೀಡುವುದು ಚುನಾವಣೆಯ ಭರವಸೆ ಎಂದು ಹೇಳಿ ಅಮಿತ್ ಶಾ ಜೀವನದಲ್ಲಿ ಒಮ್ಮೆ ಸತ್ಯ ನುಡಿದರು.
EXCLUSIVE: ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಯಾವುದೇ ತ್ಯಾಗಕ್ಕೂ ಸಿದ್ಧ - ಜೈರಾಮ್ ರಮೇಶ್ title=

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರು ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಪಕ್ಷದಲ್ಲಾದ ಬದಲಾವಣೆ ಮತ್ತು  ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಕೈಗೊಂಡಿರುವ ಕಾರ್ಯತಂತ್ರದ ಕುರಿತಾಗಿ ಝೀ ನ್ಯೂಸ್ ಡಿಜಿಟಲ್ ಸಂಪಾದಕ  ಪಿಯೂಶ್ ಬಬೇಲೆ ಯವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಮೇಶ್ ಅವರು ಮಾತನಾಡುತ್ತಾ ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಪಕ್ಷವು ಯಾವುದೇ ರೀತಿಯ ತ್ಯಾಗಕ್ಕಾದರೂ ಸಿದ್ದವಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಮಹಾಮೈತ್ರಿ ಮಾಡುತ್ತಿದೆ ಎಂದು ತಿಳಿಸಿದರು. ಚರ್ಚೆಯ ವಿಶೇಷ ಆಯ್ದ ಭಾಗಗಳು:

ಪ್ರಶ್ನೆ: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಐದು ತಿಂಗಳುಗಳು ಸರಿದಿವೆ, ಈ ಸಮಯದಲ್ಲಿ ಕಾಂಗ್ರೆಸ್ನಲ್ಲಿ ಯಾವ ರೀತಿಯ ಬದಲಾವಣೆಗಳಾಗಿವೆ?
ಉತ್ತರ: ರಾಹುಲ್ ಗಾಂಧಿ ಅಧ್ಯಕ್ಷರಾದ ಬಳಿಕ ಅಧಿವೇಶನದಲ್ಲಿ ಮಾತನಾಡುತ್ತಾ, ಪಕ್ಷದಲ್ಲಿ ಹಿರಿಯರು ಮತ್ತು ಯುವಕರು ಇಬ್ಬರೂ ಸ್ಥಾನ ಪಡೆಯುತ್ತಾರೆ ಎಂದಿದ್ದರು. ಆದರೆ ಅವರು ಅಧ್ಯಕ್ಷರಾದ ನಂತರ ಕಾರ್ಯದರ್ಶಿ ಮತ್ತು ಇತರ ಪ್ರಮುಖ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಜನರಿಗೆ ಆದ್ಯತೆ ನೀಡಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ಉಂಟಾಗುತ್ತಿರುವ ಈ ಬದಲಾವಣೆಯು ದೀರ್ಘಕಾಲದ ಬೇಡಿಕೆಯಾಗಿತ್ತು.

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ನೀವು ನೋಡಿದ ಬದಲಾವಣೆಯು ಎರಡನೇಯ ಬದಲಾವಣೆ. ಪಕ್ಷವು ಮಣಿಪುರ, ಗೋವಾ ಅಥವಾ ಅರುಣಾಚಲ ಪ್ರದೇಶಗಳಲ್ಲಿ ಮಾಡಿದಂತೆ ಕರ್ನಾಟಕದಲ್ಲಿ ವಿಳಂಬ ಮಾಡಲಿಲ್ಲ. ಪ್ರತಿಪಕ್ಷ ನಿರ್ಧಾರ ಕೈಗೊಳ್ಳುವ ಮೊದಲೇ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿತು. ಈ ಮೊದಲು ಇತರೆ ರಾಜ್ಯಗಳಲ್ಲಿ ಮಾಡಿದಂತೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ತಡ ಮಾಡಿದ್ದರೆ ಕರ್ನಾಟಕ ಕಾಂಗ್ರೆಸ್ ಕೈ ತಪ್ಪಿ ಹೋಗುತ್ತಿತ್ತು. ಕರ್ನಾಟಕವನ್ನು ಉಳಿಸಿಕೊಳ್ಳುವುದು ನಮಗೆ ಬಹಳ ಮುಖ್ಯವಾಗಿತ್ತು. ಇಲ್ಲವಾದರೆ, ಕಾಂಗ್ರೆಸ್ ಮೂರು ರಾಜ್ಯಗಳಿಗೆ ಮಾತ್ರ ಸೀಮಿತವಾಗುತ್ತಿತ್ತು. ಸಣ್ಣ ಪಕ್ಷವಾಗಿದ್ದರೂ ಸಹ ಜೆಡಿಎಸ್ ಗೆ ಮುಖ್ಯಮಂತ್ರಿ ಹುದ್ದೆಯನ್ನು ಬೇಷರತ್ತಾಗಿ ನೀಡಿತು ಮತ್ತು ನಂತರ ಹಣಕಾಸು ಹುದ್ದೆಯನ್ನು ನೀಡಿತು. ಈ ಮೂಲಕ ಕಾಂಗ್ರೆಸ್ ಶೀಘ್ರವಾಗಿ ನಿರ್ಧರಿಸಿದ್ದು ಮಾತ್ರವಲ್ಲ, ಬದಲಾಗಿ ತನ್ನ ವಿಶಾಲ ಹೃದಯವನ್ನು ತೋರಿಸಿತು. ಕಾಂಗ್ರೆಸಿನ ಈ ತ್ವರಿತ ನಿರ್ಧಾರ ನನ್ನಂತಹ ಹಳೆಯ ಕಾಂಗ್ರೆಸಿಗರಿಗೆ ಇದು ಕಾಂಗ್ರೆಸ್ ಪಕ್ಷವೇ ಅಥವಾ ಬೇರೆ ಪಕ್ಷವೇ ಎಂದು ನಂಬಲಾಗಲಿಲ್ಲ.

ಪ್ರಶ್ನೆ: ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಳಂಬವಾಗುತ್ತಿತ್ತು, ರಾಹುಲ್ ಅಧ್ಯಕ್ಷತೆಯಲ್ಲಿ ಅದು ಬದಲಾಗಿದೆ?
ಉತ್ತರ: ಈ ರೀತಿಯ ಹೋಲಿಕೆ ಸರಿಯಲ್ಲ. ಹಾಗೆ ನೋಡಿದರೆ, ಸೋನಿಯಾ ಜಿ ಮತ್ತು ರಾಹುಲ್ ಜಿ ನಡುವೆ 25 ವರ್ಷಗಳ ವ್ಯತ್ಯಾಸವಿದೆ. ಇದು ಒಂದು ಪೀಳಿಗೆಯ ಬದಲಾವಣೆ. ಈ ಪೀಳಿಗೆಯಲ್ಲಿ ವೇಗದ ನಿರ್ಧಾರಗಳು ಕಂಡುಬರುತ್ತಿವೆ. ಇದು ಕಾಂಗ್ರೆಸ್ ಗೆ ತುಂಬಾ ಒಳ್ಳೆಯದು.

ಪ್ರಶ್ನೆ: ನೀವು ಮೈತ್ರಿಕೂಟದ ಬಗ್ಗೆ ಮಾತನಾಡುತ್ತಿದ್ದೀರಿ, ಹಾಗಾದರೆ ಎಲ್ಲೆಲ್ಲಿ ಮೈತ್ರಿ ಸಾಧ್ಯತೆಗಳಿವೆ?
ಉತ್ತರ: ಉತ್ತರಪ್ರದೇಶದಿಂದ ಪ್ರಾರಂಭಿಸಿ, ನಂತರ ಗೋರಖ್ಪುರ್-ಪುಲ್ಪುರ್ ಮತ್ತು ಈಗ ಕೈರಾನಾದಲ್ಲೂ ಒಕ್ಕೂಟ ಮೈತ್ರಿ ಪ್ರಭಾವ ಬೀರಿದೆ. ಯುಪಿಯಲ್ಲಿ, ಎಸ್ಪಿ, ಬಿಎಸ್ಪಿ, RLD ಮತ್ತು ಕಾಂಗ್ರೆಸ್ ಚುನಾವಣೆಯಲ್ಲಿ ಒಟ್ಟಿಗೆ ಹೋರಾಡುತ್ತವೆ. ಬಿಹಾರದ ರಾಷ್ಟ್ರೀಯ ಜನತಾ ದಳದೊಂದಿಗೆ ಈಗಾಗಲೇ ಮೈತ್ರಿಯಿದೆ. ಇದಲ್ಲದೆ ಇನ್ನೂ ಒಂದು ಅಥವಾ ಎರಡು ಪಕ್ಷಗಳು ಸೇರಬಹುದು. ನಾವು ಜಾರ್ಖಂಡ್ ನಲ್ಲಿ ಜೆಎಂಎಂ ಮತ್ತು ಜೆವಿಎಂಗಳನ್ನು ಒಟ್ಟಿಗೆ ಸೇರಿಸುತ್ತೇವೆ. ಮಹಾರಾಷ್ಟ್ರ ಎನ್ಸಿಪಿ ಜತೆ ಹೋರಾಟ ಮಾಡುತ್ತದೆ. ಈಗಾಗಲೇ ಕೇರಳದಲ್ಲಿ ಮೈತ್ರಿಯಿದೆ. ಕರ್ನಾಟಕದಲ್ಲಿ ಜೆಡಿಎಸ್ ಜತೆ ಒಪ್ಪಂದ ಮಾಡಿಕೊಂಡಿದೆ. ತೆಲಂಗಾಣದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಸಹ ಮೈತ್ರಿ ಇರುತ್ತದೆ.  ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ರಾಜ್ಯಗಳಲ್ಲಿ ಬಿಎಸ್ಪಿಯೊಂದಿಗೆ ಸಹಕರಿಸುವ ನಿರೀಕ್ಷೆಯಿದೆ. ಇವುಗಳು ಚುನಾವಣಾ ಪೂರ್ವ ಮೈತ್ರಿಗಳು. ಚುನಾವಣೆಯ ನಂತರ ಸಹ ಮೈತ್ರಿ ಮುಂದುವರೆಯುತ್ತದೆ.

ಪ್ರಶ್ನೆ: ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಬಿಹಾರದಲ್ಲಿ ಜೆಡಿಯು ಜೊತೆಗೆ ಮೈತ್ರಿ ಸಂಭವವಿದೆಯೇ?
ಉತ್ತರ: ಚುನಾವಣಾ ಪೂರ್ವ ಮೈತ್ರಿ ಸಾಧ್ಯತೆ ಇಲ್ಲ. ಶಿವಸೇನೆಯೊಂದಿಗೆ ಹೋಗುವ ಯಾವುದೇ ಪ್ರಶ್ನೆಯಿಲ್ಲ. ಜೆಡಿಯುಗೆ ಸಂಬಂಧಿಸಿದಂತೆ, ಎರಡು ಗಂಟೆಗಳಲ್ಲಿ ತನ್ನ ಮನಸ್ಸನ್ನು ಬದಲಿಸುವ ವ್ಯಕ್ತಿಯೊಂದಿಗೆ ನೀವು ಹೇಗೆ ಹೋಗಬಹುದು? ನಿತೀಶ್ ಒಬ್ಬ ಒಳ್ಳೆಯ ಸ್ನೇಹಿತ ಮತ್ತು ನನ್ನ ಅವರ ನಡುವೆ ಆಗಾಗ ಮಾತುಕತೆ ನಡೆಯುತ್ತಿರುತ್ತದೆ. ಆದರೆ ಅವರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲ. ಜೆಡಿಯು ಬಿಜೆಪಿಯೊಂದಿಗೆ ಹೋಗಬೇಕಾದರೆ, ಅವರು ಬಿಜೆಪಿಯೊಂದಿಗೆ ಚುನಾವಣೆಗೆ ಹೋಗಬೇಕಿತ್ತು ಮತ್ತು ಸಾರ್ವಜನಿಕರಿಗೆ ತಿಳಿಸಬೇಕಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ.

ಪ್ರಶ್ನೆ: ಮೈತ್ರಿಕೂಟ ತುಂಬಾ ದೊಡ್ಡದಾಗಿದ್ದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪರ್ಧಿಸಲು ಕೇವಲ 250 ಸ್ಥಾನಗಳು ಮಾತ್ರ ಉಳಿಯುತ್ತವೆ. ಇಷ್ಟು ಕಡಿಮೆ ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸುವುದರಿಂದ ಇದು ಪಕ್ಷವನ್ನು ಕುಗ್ಗಿಸುವುದಿಲ್ಲವೇ?
ಉತ್ತರ: ಎಲ್ಲಾ ವಿಷಯಗಳು ಪರಿಸ್ಥಿತಿಯನ್ನು ಅವಲಂಬಿಸಿವೆ. ಈಗ ಕಾಂಗ್ರೆಸ್ ನ ಗುರಿಯೆಂದರೆ, ಪಕ್ಷವು ಚುನಾವಣೆಯಲ್ಲಿ ಮೈತ್ರಿಕೂಟವನ್ನು ರೂಪಿಸುವ ಮೂಲಕ ಮತ್ತು ಹೇಗಾದರೂ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವುದು. ಎಲ್ಲಿ ಕಾಂಗ್ರೆಸ್ ದುರ್ಬಲವಾಗಿದೆಯೋ ಅದನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಡುವುದು ಮತ್ತು ಪ್ರಬಲವಾಗಿರುವ ಕಡೆ ಮೈತ್ರಿಕೂಟದ ಸಹಾಯ ಪಡೆಯುವುದು ಈ ಸಮಯದಲ್ಲಿ ಕಾಂಗ್ರೆಸ್ ನ ಧರ್ಮವಾಗಿದೆ. ಒಕ್ಕೂಟದಲ್ಲಿ ನಾವು ತೆಗೆದುಕೊಳ್ಳಲು ಮಾತ್ರವಲ್ಲ, ಕಾಂಗ್ರೆಸ್ ಪಕ್ಷ ಇತರ ಪಕ್ಷಗಳಿಗೆ ನೀಡಲು ಸಿದ್ದರಿದ್ದೇವೆ ಎಂದು ತಿಳಿಯಬೇಕು. ನಾವು 500 ಸೀಟುಗಳಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಎಷ್ಟು ಸ್ಥಾನಗಳಲ್ಲಿ ಹೋರಾಡುತ್ತೇವೆ ಎಂದು ಈಗಿನಿಂದಲೇ ಹೇಳುವುದು ಸೂಕ್ತವಲ್ಲ. ಆದರೆ ಕಾಂಗ್ರೆಸ್ 2019 ರಲ್ಲಿ ಮೋದಿ ಅವರನ್ನು ಅಧಿಕಾರದಿಂದ ಹೊರಹಾಕಲಿದೆ ಎಂಬುದು ಸತ್ಯ.

ಪ್ರಶ್ನೆ: ಕಾಂಗ್ರೆಸ್ ತೃತೀಯ ರಂಗದ ನಾಯಕತ್ವವನ್ನು ಸ್ವೀಕರಿಸಲು ಸಿದ್ದವಾಗಲಿದೆ ಎಂದು ಅರ್ಥವೇ?
ಉತ್ತರ: ಇದೆಲ್ಲ ಬೇಡದ ವಿಷಯಗಳಾಗಿವೆ. ತೃತೀಯ ರಂಗ, ನಾಲ್ಕನೇ ರಂಗ, ಐದನೇ ರಂಗದಂತಹ ಯಾವುದೇ ವಿಷಯಗಳಿಲ್ಲ. ಒಂದೆಡೆ ಮೋದಿ ಇದ್ದರೆ, ಇನ್ನೊಂದೆಡೆ ವಿರೋಧ ಪಕ್ಷವಿದೆ. ವಿಪಕ್ಷಗಳಿಗೆ ಮೋದಿಯವರನ್ನು ಸೋಲಿಸಬೇಕಿದೆ ಅಷ್ಟೇ.

ಪ್ರಶ್ನೆ: ಮೈತ್ರಿಕೂಟ ಒಳ್ಳೆಯದು, ಆದರೆ 2014ರಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಚಿತ್ರಣವನ್ನು ಹೊಂದಿತ್ತು ಮತ್ತು ಮುಸ್ಲಿಂ ಪರವಾದ ಪಕ್ಷವಾಗಿತ್ತು. ಅದು 2019ರಲ್ಲಿ ಹೇಗೆ ಬದಲಾಗುತ್ತದೆ?
ಉತ್ತರ: 2019ರ ಚುನಾವಣೆಯು ಮೋದಿಯವರ ಭರವಸೆಗಳು ಏನಾದವು ಎಂಬುದರ ಬಗ್ಗೆ ಇರುತ್ತದೆ. 2014ರ ಲೋಕಸಭಾ ಚುನಾವಣೆಯ ವಿಷಯ ಕಾಂಗ್ರೆಸ್ ಆಗಿತ್ತು. 2019ರ ಚುನಾವಣೆಯಲ್ಲಿರುವುದು ಒಂದೇ ವಿಷಯ ಅದು ಮೋದಿ. ನರೇಂದ್ರ ಮೋದಿ ಸರ್ಕಾರದ ಸುಳ್ಳನ್ನು ಬಹಿರಂಗಪಡಿಸುವುದು ನಮ್ಮ ಕೆಲಸ.

ಪ್ರಶ್ನೆ:  2014 ರಲ್ಲಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಭದ್ರಕೋಟೆ ಕುಸಿದಿದ್ದು ಹೇಗೆ?
ಉತ್ತರ: ಆಂಧ್ರಪ್ರದೇಶದ ವಿಭಜನೆ ಕಾಂಗ್ರೆಸ್ ಗೆ ತೊಡಕಾಯಿತು. ನಾವು 30 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತಿದ್ದ ರಾಜ್ಯದಲ್ಲಿ ದುರದೃಷ್ಟವಶಾತ್ ಸೋಲಬೇಕಾಯಿತು. ಆದರೆ ನಾನು ಈಗಲೂ ಹೇಳುತ್ತೇನೆ, ಈ ವಿಭಜನೆಯ ನಿರ್ಧಾರದಿಂದ ತೆಲಂಗಾಣಕ್ಕೆ ಲಾಭವಾಗಿದೆ. ಈ ಹಿಂದೆ ಅಭಿವೃದ್ಧಿಯು ಕೇವಲ ಹೈದರಾಬಾದ್ ಗಷ್ಟೇ ಸೀಮಿತವಾಗಿತ್ತು. ಆದರೆ ಅದು ಈಗ ಇಡೀ ಆಂಧ್ರ ಮತ್ತು ತೆಲಂಗಾಣಕ್ಕೆ ಹಬ್ಬಿದೆ. ಇದರಿಂದ ರಾಜ್ಯಕ್ಕೆ ಲಾಭವಾಯಿತು, ಆದರೆ ಕಾಂಗ್ರೆಸ್ ಗೆ ಬಹಳ ತೊಂದರೆಯಾಯಿತು.

ಪ್ರಶ್ನೆ: ಪ್ರಚಾರದಲ್ಲಿ ಮೋದಿ ಸರಿಸಮನಾಗಿ ಹೋರಾಟ ನಡೆಸಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಾ?
ಉತ್ತರ: ಜಗತ್ತಿನಲ್ಲಿ ನರೇಂದ್ರ ಮೋದಿ ಚತುರ ಮಾತುಗಾರರು. ಆದರೆ ಅಂತಹ ವಾಕ್ ಚಾತುರ್ಯ ಕಾಂಗ್ರೆಸ್ ಗೆ ಇಲ್ಲ. ಮೋದಿ ಸುಳ್ಳನ್ನು ಸತ್ಯ ಮಾಡುತ್ತಾರೆ. ಅದು ಕಾಂಗ್ರೆಸ್ ಗೆ ಬರಲ್ಲ. ಆದರೆ ಜನರು ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತಿದ್ದಾರೆ. ಸುಳ್ಳಿಗೆ ಆಯಸ್ಸು ಕಡಿಮೆ. 

ಪ್ರಶ್ನೆ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯತಂತ್ರಗಳನ್ನು ನೀವು ಹೇಗೆ ನಿಭಾಯಿಸುತ್ತೀರಿ?
ಉತ್ತರ: ಇತ್ತೀಚಿನ ದಿನಗಳಲ್ಲಿ, ಖರೀದಿ ಮತ್ತು ಮಾರಾಟ ತಂತ್ರಗಳನ್ನು ರಣತಂತ್ರ ಎಂದು ಮಾಧ್ಯಮಗಳು ಹೇಳಲು ಪ್ರಾರಂಭಿಸಿವೆ. ಆದರೆ ಅದು ಮೊದಲು ಕರ್ನಾಟಕದಲ್ಲಿ ಮತ್ತು ಈಗ ಕೈರಾನಾದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದು ಪ್ರತಿಯೊಬ್ಬರೂ ನೋಡಿದ್ದಾರೆ. ಅಮಿತ್ ಶಾ ಬರೀ ಸುಳ್ಳು ಹೇಳುತ್ತಾರೆ. 15 ಲಕ್ಷ ರೂಪಾಯಿ ನೀಡುವುದು ಚುನಾವಣೆಯ ಭರವಸೆ ಎಂದು ಹೇಳುವ ಮೂಲಕ ಅವರು ಜೀವನದಲ್ಲಿ ಕೇವಲ ಒಂದೇ ಒಂದು ಬಾರಿ ಸತ್ಯ ನುಡಿದರು. 

ಪ್ರಶ್ನೆ: ಕೊನೆಯ ಪ್ರಶ್ನೆ, ಮೋದಿ ಸರ್ಕಾರದ ನಾಲ್ಕು ವರ್ಷಗಳನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ಉತ್ತರ: ಅಧಿಕಾರಕ್ಕೆ ಬರುವ ಮೊದಲು ಮೋದಿ ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ ಎಂದು ಭರವಸೆ ನೀಡಿದ್ದರು. ಆದರೆ ವಾಸ್ತವದ ಸಂಗತಿ ಗರಿಷ್ಠ ಮಾರ್ಕೆಟಿಂಗ್, ಕನಿಷ್ಠ ಸತ್ಯ ಎನ್ನುವಂತಾಗಿದೆ. ಇದಕ್ಕೆ ಹಿಂದಿಯಲ್ಲಿ ಮಾರ್ಕೆಟಿಂಗ್ ಜ್ಯಾದಾ, ಸಚ್ಚಾಯಿ ಕಮ್ ಎಂದು ಹೇಳುತ್ತಾರೆ. 

Trending News