ಮುಂಬೈ: ಬುಧುವಾರ ಬೆಳಗ್ಗೆ 10 ಗಂಟೆಗೆ ಚಾಲನೆ ಸಿಕ್ಕಿರುವ ಈ ರ್ಯಾಲಿ ಸಾಯಂಕಾಲ ಐದು ಘಂಟೆಗೆ ಮುಂಬೈನಲ್ಲಿರುವ ಸೋಮಾಯ್ಯಾ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಗುರುವಾರದಂದು ಆಜಾದ್ ಮೈದಾನದಲ್ಲಿ ರ್ಯಾಲಿ ಅಂತ್ಯಗೊಳ್ಳಲಿದೆ ಅಲ್ಲಿ ಎಲ್ಲ ರೈತರು ತಮ್ಮ ಬೇಡಿಕೆಗಳ ಇಡೆರಿಕೆಗಾಗಿ ಅನಿರ್ಧಿಷ್ಟ ಅವಧಿಯವರೆಗೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವರು ಎನ್ನಲಾಗಿದೆ.
ಈ ರ್ಯಾಲಿಯನ್ನು ಲೋಕ ಸಂಘರ್ಷ ಮೋರ್ಚಾ ಆಯೋಜಿಸಿದೆ.ಇದರ ನೇತೃತ್ವವನ್ನು ಜಲ ಸಂರಕ್ಷಣಾ ಕಾರ್ಯಕರ್ತ ರಾಜೇಂದ್ರ ಸಿಂಗ್ ಮತ್ತು ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ವಹಿಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಈಗ ರ್ಯಾಲಿ ಕುರಿತಾಗಿ ಪ್ರತಿಕ್ರಿಯಿಸಿರುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಶಿಂಧೆ "ಮಹಾರಾಷ್ಟ್ರದಾದ್ಯಂತ ರೈತರು ರಾಜ್ಯ ಸರಕಾರದ ರೈತ ವಿರೋಧಿ ನೀತಿಯಿಂದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ರೈತರ ಐಕ್ಯತೆಯನ್ನು ಬಿಟ್ಟು ನಮಗೆ ಯಾವುದೇ ಆಯ್ಕೆಗಳಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೈತರು ಪ್ರಮುಖವಾಗಿ ಅರಣ್ಯ ಹಕ್ಕುಗಳ ಕಾಯಿದೆ, ಸಾಲ ಮನ್ನಾ, ನರ್-ಪರ್, ದಮಂಗಂಗಾ ಮತ್ತು ವಿಗ್ ಪಿಂಜಲ್ ನದಿ ಸಂಪರ್ಕ ಯೋಜನೆಗಳ ಕಾರಣದಿಂದಾಗಿ ಬುಡಕಟ್ಟು ಗ್ರಾಮಗಳ ಸ್ಥಳಾಂತರವನ್ನು ನಿಲ್ಲಿಸುವುದು, ಮುಂಬಯಿ-ನಾಗ್ಪುರ್ ಎಕ್ಸ್ಪ್ರೆಸ್ವೇ ಮತ್ತು ಬುಲೆಟ್ನ ಟ್ರೈನ್ ಗಾಗಿ ಭೂಸ್ವಾಧೀನವನ್ನು ನಿಲ್ಲಿಸುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಸುಮಾರು 50,000 ರೈತರು ಉತ್ತರ ಮಹಾರಾಷ್ಟ್ರದ ನಾಶಿಕ್ ನಿಂದ ಮುಂಬೈಗೆ ಪಾದಯಾತ್ರೆಯನ್ನು ಕೈಗೊಂಡಿದ್ದರು.