ವಿಶಾಖಪಟ್ಟಣಂ: ವೈಎಸ್‌ಆರ್‌ಸಿಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿಮಂತ್ರಿಗಳೂ ಆಗಿರುವ ವೈ. ಎಸ್. ಜಗನ್ ಮೋಹನ ರೆಡ್ಡಿ ಸಮ್ಮತಿಸಿದರೆ ಟಿಡಿಪಿಯ 10 ಶಾಸಕರು ವೈಎಸ್‌ಆರ್‌ಸಿಪಿ ಪಕ್ಷಕ್ಕೆ ಸೇರಲು ಸಿದ್ಧರಿದ್ದಾರೆ ಎಂದು ಆಂಧ್ರ ಪ್ರದೇಶದ ಪ್ರವಾಸೋದ್ಯಮ ಸಚಿವ ಎಂ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಈಗಾಗಲೇ ಟಿಡಿಪಿಯ ನಾಲ್ವರು ರಾಜ್ಯಸಭಾ ಸಂಸದರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದೀಗ ಜಗನ್ ಒಪ್ಪಿದರೆ ಟಿಡಿಪಿಯ 10 ಮಂದಿ ಶಾಸಕರು ವೈಎಸ್‌ಆರ್‌ಸಿಪಿ ಪಕ್ಷಕ್ಕೆ ಸೇರಲು ತುದಿಗಾಲಲ್ಲಿ ನಿಂತಿರುವುದಾಗಿ ಸಚಿವ ಎಂ. ಶ್ರೀನಿವಾಸ ರಾವ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರನ್ನು ಗುರಿಯಾಗಿಸಿ ತೀವ್ರ ವಾಗ್ಧಾಳಿ ನಡೆಸಿದ ರಾವ್, ಕೃಷ್ಣ ನದಿಯ ದಡದಲ್ಲಿರುವ ತನ್ನ ಮನೆಯನ್ನು ಮುಳುಗಿಸಲು ರಾಜ್ಯ ಸರ್ಕಾರ ಸಂಚು ರೂಪಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. ಅಷ್ಟೇ ಅಲ್ಲದೆ ನಾಯ್ಡು ಅವರ ಪ್ರವಾಹವು ಕೃತಕವಾಗಿದೆ (ಮಾನವ ನಿರ್ಮಿತ) ಎಂದು ಮತ್ತಷ್ಟು ವಾಗ್ದಾಳಿ ನಡೆಸಿದರು
ನಾಯ್ಡು ಅವರು ಕೃತಕ ಪ್ರವಾಹ ಎಂಬ ಹೊಸ ತನವನ್ನು ಹುಟ್ಟುಹಾಕಿದ್ದಾರೆ. ನೀವು(ಚಂದ್ರಬಾಬು ನಾಯ್ಡು) ಕೃತಕ ಪ್ರವಾಹವನ್ನು ಸೃಷ್ಟಿಸಬಹುದಾದರೆ ದಯಮಾಡಿ ಅದನ್ನು ಮಳೆಯಿಲ್ಲದೆ ಕಂಗಾಲಾಗಿರುವ ವಿಶಾಖಪಟ್ಟಣಂ ಮತ್ತು ವಿಜ್ಯಾನಗರಂ ಕಡೆ ಕಳುಹಿಸಿ ಎಂದು ಲೇವಡಿ ಮಾಡಿದರು.
ಗಮನಾರ್ಹವಾಗಿ, ಆಂಧ್ರ ಪ್ರದೇಶದ ಹಲವೆಡೆ ಎಡಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರು ಹೆಚ್ಚಾಗುವ ಆತಂಕ ಇದ್ದದ್ದರಿಂದ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಮನೆ ಖಾಲಿ ಮಾಡುವಂತೆ ತಡೆಪಲ್ಲಿ ಗ್ರಾಮದ ಉಪ ತಹಶೀಲ್ದಾರ್ ನೋಟೀಸ್ ನೀಡಿದ್ದರು.