ಕೊಲ್ಕತ್ತಾ: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳ ಹೊಟ್ಟೆಯಿಂದ 1.5 ಕೆ.ಜಿ. ತೂಕದ ಆಭರಣಗಳು ಹಾಗೂ 90 ನಾಣ್ಯಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಪಶ್ಚಿಮ ಬಂಗಾಳದ ರಾಮಪುರ್ಹಟ್ ಸರಕಾರಿ ಆಸ್ಪತ್ರೆಯ ವೈದ್ಯರು ಹೊರ ತೆಗೆದಿದ್ದಾರೆ.
ಚಿನ್ನ ಮತ್ತು ತಾಮ್ರದ ಸರ, ಉಂಗುರ, ಕಿವಿಯೋಲೆ, ಗೆಜ್ಜೆ, ಬ್ರಾಸ್ಲೇಟ್, ವಾಚ್ ಸೇರಿದಂತೆ 1.5 ಕೆ.ಜಿ. ತುಕಡ ಆಭರಣಗಳು ಮತ್ತು 5 ಹಾಗೂ 10 ರೂ. ಮೌಲ್ಯದ ಒಟ್ಟು 90 ನಾಣ್ಯಗಳನ್ನು ಆಕೆಯ ಹೊಟ್ಟೆಯಿಂದ ಹೊರತೆಗೆಯಲಾಗಿದೆ ಎಂದು ರಾಮಪುರ್ಹಟ್ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸಿದ್ಧಾರ್ಥ್ ಬಿಸ್ವಾಸ್ ಹೇಳಿದ್ದಾರೆ.
"ಮನೆಯಲ್ಲಿ ಆಭರಣಗಳು ಕಾಣೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಆದರೆ ಅದನ್ನೆಲ್ಲಾ ನನ್ನ ಮಗಳೇ ನುಂಗಿದ್ದಾಳೆ ಎಂದು ನಾನು ಭಾವಿಸಿರಲಿಲ್ಲ. ಈ ಬಗ್ಗೆ ಮಗಳನ್ನು ಕೇಳಿದರೆ ಅಳುತ್ತಿದ್ದಳು. ಕೆಲ ದಿನಗಳ ಹಿಂದಿನಿಂದ ಊಟದ ಬಳಿಕ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರು. ಈ ಬಗ್ಗೆ ಹಲವು ಆಸ್ಪತ್ರೆಗಳಲ್ಲಿ ತೋರಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆಕೆ ಮಾನಸಿಕ ಅಸ್ವಸ್ಥೆಯಾದ್ದರಿಂದ ಆಕೆಯ ಮೇಲೆ ಎಷ್ಟೇ ನಿಗಾ ವಹಿಸಿದ್ದರೂ, ಯಾರೂ ಇಲ್ಲದ ಸಮಯ ನೋಡಿ ಇವೆಲ್ಲವನ್ನೂ ನುಂಗಿದ್ದಾಳೆ" ಎಂದು ಮಹಿಳೆಯ ತಾಯಿ ತಿಳಿಸಿದ್ದಾರೆ.