ಮೂತ್ರಪಿಂಡ-ಹೃದಯ ಶಸ್ತ್ರಚಿಕಿತ್ಸೆಗೊಳಗಾದವರಿಗೆ ಮಾತ್ರೆ ತಲುಪಿಸಿ ಮಾನವೀಯತೆ ಮೆರೆದ ಕೊರೋನಾ ಸೈನಿಕರು

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ ಎಂಬ 67 ವರ್ಷದ ವೃದ್ದೆಗೆ ಒಂದು ವರ್ಷದ ಹಿಂದೆಯೆ ಮೂತ್ರಪಿಂಡ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. 

Last Updated : Apr 16, 2020, 12:43 PM IST
ಮೂತ್ರಪಿಂಡ-ಹೃದಯ ಶಸ್ತ್ರಚಿಕಿತ್ಸೆಗೊಳಗಾದವರಿಗೆ ಮಾತ್ರೆ ತಲುಪಿಸಿ ಮಾನವೀಯತೆ ಮೆರೆದ ಕೊರೋನಾ ಸೈನಿಕರು title=

ಬೆಂಗಳೂರು: ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೊರೊನಾವೈರಸ್ (Coronavirus) ಕೋವಿಡ್-19 (Covid-19) ಹಿನ್ನೆಲೆಯಲ್ಲಿ ಕಾರ್ಯನಿರ್ವಸುತ್ತಿರುವ ಕಲಬುರಗಿ ಕರೋನಾ ವಾರಿಯರ್ಸ್ (ಸೈನಿಕರು) ಮೂತ್ರಪಿಂಡ ಹಾಗೂ ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ ಇಬ್ಬರು ರೋಗಿಗಳಿಗೆ ತುರ್ತಾಗಿ ಅಗತ್ಯವಿರುವ ಮಾತ್ರೆಗಳನ್ನು ತಲುಪಿಸುವ ಮೂಲಕ ಸಹಾಯ ಮಾಡಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ ಎಂಬ 67 ವರ್ಷದ ವೃದ್ದೆಗೆ ಒಂದು ವರ್ಷದ ಹಿಂದೆಯೆ ಮೂತ್ರಪಿಂಡ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ರೋಗಿಗೆ ಪ್ರತಿ ಮಾಹೆ ಸೇವಿಸಬೇಕಾದ ಮಾತ್ರೆಗಳನ್ನು ತಮ್ಮ ಸ್ವಂತ ವಾಹನದಲ್ಲಿ ನಿಂಬರಗಾ ಗ್ರಾಮಕ್ಕೆ ಕೊರೋನಾ ಸೈನಿಕರಾದ ನಾಗರಾಜ್ ಹೋಗಿ ತಲುಪಿಸಿದ್ದಾರೆ. ಇದಲ್ಲದೆ ಸೇಡಂ ತಾಲೂಕಿನ ಹಂಗನಳ್ಳಿ ಗ್ರಾಮದ ನಾಗಮ್ಮ ಎಂಬ 58 ವರ್ಷದ ವೃದ್ದೆ ಆರು ತಿಂಗಳ ಹಿಂದೆ ಗುಲ್ಬರ್ಗಾ ಹಾರ್ಟ್ ಫೌಂಡೇಶನ್ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಇವರಿಗೂ ಸಹ ವೈದ್ಯರು ಆರು ತಿಂಗಳು ಪ್ರತಿ ದಿನ ತಪ್ಪದೇ ಮಾತ್ರೆಗಳನ್ನು ಸೇವಿಸಲು ಸಲಹೆ ನೀಡಿದ್ದರು. ಆದರೆ ಲಾಕ್‍ಡೌನ್ (Lockdown) ಪ್ರಯುಕ್ತ  ಇವರಿಗೆ ಕಲಬುರಗಿಗೆ ಬಂದು ಮಾತ್ರೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಕರೋನಾ ವಾರಿಯರ್ಸ್ ಗಳಾದ ಹರ್ಷಲ್ ನಾಗರೇ ಮತ್ತು ರಾಜು ಜೇವರ್ಗಿ ಅವರು ತಮ್ಮ ಸ್ವಂತ ವಾಹನದಲ್ಲಿ ಹಂಗನಳ್ಳಿ ಗ್ರಾಮಕ್ಕೆ ಹೋಗಿ ಮಾತ್ರೆ ತಲುಪಿಸಿದ್ದು ಇವರ ಮಾನವೀಯತೆ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ ಇವರ ಮೊಮ್ಮಗನಾದ ಸ್ವಪ್‍ನಿಲ್ ಹಾಗೂ ಹಂಗನಳ್ಳಿ ಗ್ರಾಮದ ನಾಗಮ್ಮ ಅವರ ಪುತ್ರಿ ಕು. ಸುಲೋಚನಾ ಎಂಬುವವರು ಕರ್ನಾಟಕ ಕೊರೋನಾ ಸೈನಿಕರ ತಂಡದ ವಾಟ್ಸ್‍ಆ್ಯಪ್ ಗ್ರೂಪ್‍ನಲ್ಲಿ ಲಾಕ್‍ಡೌನ್ ಇರುವ ಪ್ರಯುಕ್ತ ರೋಗಿಗಳಿಗೆ ಪ್ರತಿ ತಿಂಗಳು ಸೇವಿಸಬೇಕಾದ ಮಾತ್ರೆಗಳನ್ನು ಪೂರೈಸುವಂತೆ ಮನವಿ ಮಾಡಿದರು.

ಬೆಂಗಳೂರಿನ ರಾಘವೆಂದ್ರ ಅವರು ಕಲಬುರಗಿ ಜಿಲ್ಲೆಯ ಕರೋನಾ ಸೈನಿಕರಾದ ನಾಗರಾಜ, ಹರ್ಷಲ್ ನಾಗರೆ ಹಾಗೂ ರಾಜು ಜೇವರ್ಗಿಯವರಿಗೆ ಈ ಕೆಲಸ ಪೂರ್ಣಗೊಳಿಸುವಂತೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಕಲಬುರಗಿ ಕೊರೋನಾ ವಾರಿಯರ್ಸ್ ತಮ್ಮ ಸ್ವಂತ ವಾಹನದಲ್ಲಿ ತೆರಳಿ ಅಗತ್ಯವಿರುವವರಿಗೆ ಮಾತ್ರೆಗಳನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಕೆಲಸ ಮಾಡುತ್ತಿರುವ ಕೊರೋನಾ ವಾರಿಯರ್ಸ್ ತಮಗೆ ಈ ಮಾತ್ರೆಗಳನ್ನು ತಂದು ಕೊಟ್ಟು, ನೆರವಾಗಿದ್ದಕ್ಕೆ ತಮಗೆ ತುಂಬಾ ಅನುಕೂಲವಾಗಿದೆ. ಇದಕ್ಕಾಗಿ ಕೊರೋನಾ ವಾರಿಯರ್ಸ್ ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಎಂದು ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ ಹಾಗೂ ಹಂಗನಳ್ಳಿ ಗ್ರಾಮದ ನಾಗಮ್ಮ ಅವರ ಮಗಳು ಸುಲೋಚನಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
 

Trending News