ನವದೆಹಲಿ: ಜೂನ್ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಸ್ಥಿತಿಯನ್ನು ನಿರ್ಣಯಿಸಿದ ನಂತರ ಚಿತ್ರಮಂದಿರಗಳನ್ನು ತೆರೆಯಲು ಪರಿಗಣಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ (Prakash Javadekar) ಮಂಗಳವಾರ ಹೇಳಿದ್ದಾರೆ.
ಕೋವಿಡ್ -19 (Covid-19) ಕಾರಣದಿಂದಾಗಿ ಚಲನಚಿತ್ರೋದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಚಲನಚಿತ್ರ ನಿರ್ಮಾಪಕರ ಸಂಘ, ಸಿನಿಮಾ ಪ್ರದರ್ಶಕರು ಮತ್ತು ಚಲನಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ಸಚಿವರು ಈ ವಿಷಯ ತಿಳಿಸಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚಿತ್ರಮಂದಿರಗಳನ್ನು ತೆರೆಯುವ ಬೇಡಿಕೆಯ ಮೇರೆಗೆ ಜೂನ್‌ನಲ್ಲಿ ಸಾಂಕ್ರಾಮಿಕ ಸ್ಥಿತಿಯನ್ನು ನಿರ್ಣಯಿಸಿದ ನಂತರ ಇದನ್ನು ಪರಿಗಣಿಸಲಾಗುವುದು ಎಂದು ಚಲನಚಿತ್ರ ನಿರ್ಮಾಪಕರ ಸಂಘ, ಸಿನಿಮಾ ಪ್ರದರ್ಶಕರು ಮತ್ತು ಚಲನಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಸಚಿವರು ನಡೆಸಿದ ಸಭೆಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಲನಚಿತ್ರಗಳು / ಧಾರಾವಾಹಿಗಳ ನಿರ್ಮಾಣವನ್ನು ಪ್ರಾರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಮಾಪಕರ ಸಂಘದ ಬೇಡಿಕೆಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ಜವಾಡೇಕರ್ ಅವರು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.