ಬೆಂಗಳೂರು : ಸಿನಿಮಾ ನನ್ನ ರಕ್ತದಲ್ಲಿಯೇ ಬೆರೆತಿದೆ. ನನಗೆ ಕನ್ನಡ ಭಾಷೆ ಬರುವುದಿಲ್ಲ. ಆದರೆ ಮುಂದೊಂದು ಕನ್ನಡ ಸಿಮಾದಲ್ಲಿ ನಟಿಸುವ ಸಂದರ್ಭ ಬರಬಹುದು ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹೇಳಿದ್ದಾರೆ.
ಇಲ್ಲಿನ ವಿಧಾನಸೌಧದ ಮುಂಭಾಗದಲ್ಲಿ ಗುರುವಾರ ನಡೆದ ಬೆಂಗಳೂರು 10ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಮತ್ತು ಬೆಂಗಳೂರು ಕಪೂರ್ ಕುಟುಂಬಕ್ಕೆ ಬಹಳ ವಿಶಿಷ್ಟವಾಗಿದೆ. ನಮ್ಮ ತಾತನಿಗೆ ಬೆಂಗಳೂರು, ಮೈಸೂರು ಎಂದರೆ ಬಹಳ ಪ್ರೀತಿ. ಎಲ್ಲಾ ಧರ್ಮವನ್ನೂ ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಸಿನಿಮಾಕ್ಕಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಭಾಗಿಯಾಗಿದ್ದು ತಮಗೆ ಖುಷಿ ತಂದಿದೆ ಎಂದು ಹೇಳಿದರು.
ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು, ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
10 ದಿನಗಳ ಈ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಮಾರ್ಚ್ 1 ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಮುಕ್ತಾಯ ಸಮಾರಂಭದಲ್ಲಿ ತೆರೆ ಬೀಳಲಿದ್ದು, ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ರಾಜ್ಯಪಾಲ ವಜುಭಾಯ್ ವಾಲಾ ಅವರು ವಿಜೇತ ಚಿತ್ರ ನಿರ್ಮಾಪಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಚಿತ್ರೋತ್ಸವದ ವಿವರ
ರಾಜಾಜಿನಗರದಲ್ಲಿರುವ ಒರಿಯಾನ್ ಮಾಲ್‌ನಲ್ಲಿರುವ 11 ಪರದೆಗಳಲ್ಲಿ, ಕಲಾವಿದರ ಸಂಘದ ನೂತನ ಕಟ್ಟಡ ಡಾ.ರಾಜ್‌ಭವನನದಲ್ಲೂ ಪ್ರದರ್ಶನ ಚಲನಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಈ ಬಾರಿಯ ಉತ್ಸವದಲ್ಲಿ 60 ದೇಶಗಳಿಂದ 200 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಸ್ಪರ್ಧಾ ವಿಭಾಗದಲ್ಲಿ ಏಷಿಯನ್ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳು, ಕನ್ನಡ ಚಿತ್ರಗಳು ಹಾಗು ಕನ್ನಡದ ಜನಪ್ರಿಯ ಚಿತ್ರಗಳು ಪ್ರದರ್ಶನವಾಗುತ್ತಿವೆ.
ವಿಶ್ವದ ಸಮಕಾಲೀನ ಸಿನಿಮಾ, ಫೋಕಸ್ ವಿಭಾಗದಲ್ಲಿ ಥಾಯ್‌ಲ್ಯಾಂಡ್, ಕೆನಡಾ, ಜರ್ಮನಿ, ಲ್ಯಾಟಿನ್ ಅಮೆರಿಕ ವಲಯ, ಸಿಂಹಾವಲೋಕನದಲ್ಲಿ ರಷ್ಯಾ ನಿರ್ದೇಶಕ ಅಲೆಸ್ಕಿ ಬಾಲಬನೊವ್, ಕನ್ನಡ ಚಿತ್ರ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್, ಮರಾಠಿ ನಿರ್ದೇಶಕರಾದ ಸುಮಿತ್ರಾ ಭಾವೆ ಮತ್ತು ಸುನಿಲ್ ಸುಕಂದರ್‌ಕರ್ ಅವರ ಚಿತ್ರಗಳ ಪ್ರದರ್ಶನವಿದೆ.
ಚಿತ್ರೋತ್ಸವದಲ್ಲಿ ಏಷ್ಯನ್ ಸಿನಿಮಾಗಳ ವಿಭಾಗದಲ್ಲಿ 13 ಚಿತ್ರಗಳು, ಇಂಡಿಯನ್ ಸಿನಿಮಾ ವಿಭಾಗದಲ್ಲಿ 14 ಚಿತ್ರಗಳು, ಕನ್ನಡ ಸಿನಿಮಾ ವಿಭಾಗದಲ್ಲಿ ತುಳು ಭಾಷೆಯ ಚಿತ್ರ ಸೇರಿ 12 ಚಿತ್ರಗಳು ಮತ್ತು ಕನ್ನಡ ಮನರಂಜನೆ ಚಿತ್ರ ವಿಭಾಗದಲ್ಲಿ 8 ಚಿತ್ರಗಳು ಪ್ರದರ್ಶನವಾಗಲಿವೆ. ಕನ್ನಡ ಸಿನಿಮಾ ವಿಭಾಗದಲ್ಲಿ ಈ ಬಾರಿ, ಅಲ್ಲಮ ಬೇಟಿ, ಡಾ.ಸುಕನ್ಯ, ಹೆಬ್ಬೆಟ್ ರಾಮಕ್ಕ, ಮಾರ್ಚ್ 22, ಮೂಕಹಕ್ಕಿ, ಮೂಕನಾಯಕ, ಮೂಡಲ ಸೀಮೆಯಲ್ಲಿ ನೀರು ತಂದವರು ,ನೇಮೊದ ಬೂಳ್ಯ (ತುಳು), ರಿಸರ್ವೇಷನ್ ಮತ್ತು ಶುದ್ಧಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಮಕ್ ಕಾಲೇಜ್ ಕುಮಾರ್ ಹೆಬ್ಬುಲಿ ಒಂದು ಮೊಟ್ಟೆಯ ಕಥೆಮಫ್ತಿ ರಾಜಕುಮಾರ ಮತ್ತು ತಾರಕ್ ಚಿತ್ರಗಳು ಜನಪ್ರಿಯ ಮನರಂಜನೆ ಚಿತ್ರಗಳ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಫೆ.23 ಮತ್ತು ಫೆ.24ರಂದು ನಡೆಯುವ ಚಲನಚಿತ್ರ ಪ್ರದರ್ಶನದ ವಿವರ ಈ ರೀತಿ ಇದೆ.
Film screening schedule for day 1 and 2 - 23rd & 24th, Feb'18!
Note - Registration is closed.
No daily passes available. #Biffes pic.twitter.com/aXvIEGUjVu— BIFFES (@BIFFESBLR) February 22, 2018
10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೆಚ್ಚಿನ ಮಾಹಿತಿಗಾಗಿ, www.biffes.in ವೆಬ್ ಸೈಟ್'ಗೆ ಭೇಟಿ ನೀಡಬಹುದು.