ವರಮಹಾಲಕ್ಷ್ಮಿ ಹಬ್ಬಕ್ಕೆ ಈ ರೀತಿ ಸಿದ್ಧತೆ ಮಾಡಿಕೊಳ್ಳಿ...

ಲಕ್ಷ್ಮಿಗೆ ರೇಷ್ಮೆ ವಸ್ತ್ರವೆಂದರೆ ಬಹಳ ಪ್ರಿಯ ಇದರ ಜೊತೆಗೆ ಕಳಸಕ್ಕೆ ಬಂಗಾರದ ಒಡವೆ ಇರಿಸಿ ಪೂಜಿಸಿದರೆ ತುಂಬಾ ಒಳ್ಳೆಯದು.

Written by - Yashaswini V | Last Updated : Jul 30, 2020, 03:11 PM IST
ವರಮಹಾಲಕ್ಷ್ಮಿ ಹಬ್ಬಕ್ಕೆ ಈ ರೀತಿ ಸಿದ್ಧತೆ ಮಾಡಿಕೊಳ್ಳಿ... title=

ಬೆಂಗಳೂರು: ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಕಾಡುತ್ತಿರುವ ಕರೋನಾವೈರಸ್ ಬಿಕ್ಕಟ್ಟಿನ ನಡುವೆ ಈ ವರ್ಷ ಮೊದಲಿನಂತೆ ಸಡಗರ ಇಲ್ಲದಿದ್ದರೂ ಎಲ್ಲರೂ ಸಾಧ್ಯವಾದಷ್ಟು ತಮ್ಮ ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಮಾಡಿಕೊಳ್ಳುತ್ತಾರೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ನಾವು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುತ್ತೇವೆ. ದಕ್ಷಿಣ ಭಾರತೀಯರಿಗೆ ಅದರಲ್ಲಿಯೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ವರಮಹಾಲಕ್ಷ್ಮೀ ಹಬ್ಬವು ಒಂದು ಪ್ರಮುಖ ಆಚರಣೆಯಾಗಿದೆ. 

ವರಮಹಾಲಕ್ಷ್ಮೀ ಹಬ್ಬ ಹೆಸರೇ ಸೂಚಿಸುವಂತೆ ಇದು ಲಕ್ಷ್ಮೀ ದೇವಿಯನ್ನು ಪೂಜಿಸುವ, ಆರಾಧಿಸುವ ದಿನ. ಹಬ್ಬಗಳಲ್ಲೇ ವರಮಹಾಲಕ್ಷ್ಮೀ ಹಬ್ಬ ಎಂದರೆ ಗೃಹಿಣಿಯರಿಗೆ ಒಂದು ರೀತಿಯ ಸಂಭ್ರಮ. ಲಕ್ಷ್ಮೀ ಎಂದರೆ ಹಣ, ಸಂಪತ್ತು, ಐಶ್ವರ್ಯ ನೀವು ಯಾವ ಹೆಸರಿನಿಂದ ಬೇಕಾದರೂ ಕರೆಯಬಹುದು. ಎಂಟು ಸಂಪತ್ತುಗಳು ಎಂದರೆ ಸಿರಿ, ಭೂಮಿ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ಸಂತೋಷ, ಪುಷ್ಟಿ(ಬಲ) ಈ ಪ್ರತಿಯೊಂದು ಶಕ್ತಿಯನ್ನು ಲಕ್ಷ್ಮೀ ಎಂದು ಕರೆಯಲಾಗುತ್ತದೆ. ಹೀಗೆ  ಹಲವಾರು ನಾಮಗಳಿಂದ ಕರೆಯಲ್ಪಡುವ ಲಕ್ಷ್ಮೀಯನ್ನು ಶ್ರಾವಣ ಮಾಸದಲ್ಲಿ ಭಕ್ತಿಯಿಂದ ವ್ರತ ಆಚರಿಸಿ ಪೂಜಿಸುವುದರಿಂದ  ಲಕ್ಷ್ಮೀಯು ಸಂತೃಪ್ತಳಾಗಿ ಭಕ್ತರ ಬಯಕೆಗಳನ್ನು ಈಡೇರಿಸುತ್ತಾಳೆ ಮತ್ತು ತನ್ನ ಭಕ್ತರಿಗೆ ಉತ್ತಮ ಸಂಪತ್ತನ್ನು ಕರುಣಿಸುತ್ತಾಳೆ ಎಂಬುದು ನಂಬಿಕೆ. ಆದ್ದರಿಂದಲೇ ಈ ಹಬ್ಬವನ್ನು 'ವರಮಹಾಲಕ್ಷ್ಮೀ' ಹಬ್ಬ ಎಂದು ಆಚರಿಸಲಾಗುತ್ತದೆ.

ವರಮಹಾಲಕ್ಷ್ಮೀ ವ್ರತ ಆಚರಣೆಯ ಹಿನ್ನೆಲೆ:
ವರಮಹಾಲಕ್ಷ್ಮೀ ವ್ರತದ ಆಚರಣೆಗೆ ಯಾವುದೇ ಕಠಿಣ ನಿಯಮಗಳಿಲ್ಲ. ಭಕ್ತರು ಭಕ್ತಿಯಿಂದ ತಮಗೆ ಅನುಕೂಲಕರ ರೀತಿಯಲ್ಲಿ ಸರಳವಾಗಿ ಈ ವ್ರತವನ್ನು ಆಚರಿಸಬಹುದು. ಎಲ್ಲಾ ಹಬ್ಬಗಳಿಗೆ ಇರುವಂತೆ ವರಮಹಾಲಕ್ಷ್ಮಿಪೂಜೆಗೂ ಒಂದು ಕಥೆಯಿದೆ.

ಪುರಾಣಗಳ ಪ್ರಕಾರ ಲಕ್ಷ್ಮೀಯು ಕ್ಷೀರ ಸಾಗರದಿಂದ ಅವತಾರ ತಾಳಿದಳು ಎಂದು ಹೇಳಲಾಗುತ್ತದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸಕಿಯ ಸಹಾಯದೊಂದಿಗೆ ಮಂದರ ಕಡಿಯುತ್ತಿರುವಾಗ ಕ್ಷೀರ ಸಾಗರದಲ್ಲಿ ಪರಿಶುದ್ಧವಾಗಿ ಶ್ವೇತ ವರ್ಣದಲ್ಲಿ ಲಕ್ಷ್ಮೀ ಉದ್ಭವಿಸಿದಳೆಂದು ಹೇಳಲಾಗುತ್ತದೆ. ಹಾಗಾಗಿ ಈ ವರಮಹಾ ಲಕ್ಷ್ಮೀಯ ದಿನ ತಾಯಿಗೆ ಶ್ವೇತ ವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ. ಈ ವರಮಹಾಲಕ್ಷ್ಮೀ ಹಬ್ಬವನ್ನು ಯಾರು ಬಹಳ ನಿಷ್ಠೆಯಿಂದ ಮಾಡುವರೋ ಅವರಿಗೆ ಹಾಗೂ ಅವರ ಕುಟುಂಬದವರೆಲ್ಲರಿಗೂ ಒಳಿತಾಗುವುದು. ಹೀಗಾಗಿ ನಮ್ಮ ಪೂರ್ವಿಕರು ಹೇಳುವ ಹಾಗಿ ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮೀ ತಾಂಡವವಾಡುತ್ತಾಳೆ.

ಇದಕ್ಕೆ ಇರುವ ಇನ್ನೊಂದು ಕಥೆ ಎಂದರೆ, ಚಾರುಮತಿ ಎಂಬ ಮಹಿಳೆಯ ಕಥೆ ಈ ಪೂಜೆಗೆ ಪ್ರೇರಣೆಯಾಗಿದೆ. ಒಮ್ಮೆ ಪಾರ್ವತಿಯು ತನ್ನ ಪತಿಯಾದ ಶಿವನಲ್ಲಿ ಒಂದು ಬೇಡಿಕೆ ಇಟ್ಟಳಂತೆ. ವಿವಾಹವಾದ ಬಳಿಕ ಓರ್ವ ಮಹಿಳೆ ತನ್ನ ಜೀವನಕ್ಕೆ ಬೇಕಾದ ಎಲ್ಲವನ್ನೂ ಹೇಗೆ ಪಡೆಯಬಹುದು? ಅಂದರೆ ಪತಿಯ ಪ್ರೇಮ, ಮಕ್ಕಳ ಸುಖ, ಮೊಮ್ಮಕ್ಕಳ ಸುಖ ಮತ್ತು ಸಾಕಷ್ಟು ಧನಸಂಪತ್ತು ಎಲ್ಲವನ್ನೂ ಹೇಗೆ ಪಡೆಯುವುದು ಎಂದು ಕೇಳಿದಳಂತೆ. ಅದಕ್ಕೆ ಉತ್ತರಿಸಿದ ಶಿವ ಯಾವ ಸಾಧ್ವಿ ವರಮಹಾಲಕ್ಷ್ಮಿಪೂಜೆಯನ್ನು ನೆರವೇರಿಸುತ್ತಾಳೆಯೋ ಆಕೆಗೆ ಜೀವನದಲ್ಲಿ ಎಲ್ಲಾ ಸುಖಗಳು ಲಭಿಸುತ್ತವೆ ಎಂದು ಹೇಳಿ ಚಾರುಮತಿಯ ಕಥೆಯನ್ನು ಪ್ರಾರಂಭಿಸಿದನಂತೆ.

ಮಗಧರಾಜ್ಯದಲ್ಲಿ ಚಾರುಮತಿ ಎಂಬ ಅತಿ ದೈವಭಕ್ತೆಯುಳ್ಳ ಮಹಿಳೆಯೊಬ್ಬಳಿದ್ದಳು. ತನ್ನ ಸದ್ಗುಣಗಳಿಂದ ಆಕೆ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು. ಆದರ್ಶ ಸತಿ, ಸೊಸೆ ಮತ್ತು ತಾಯಿಯ ಪಾತ್ರವನ್ನು ಅತಿ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಳು. ಈಕೆಯ ಗುಣದಿಂದ ಪ್ರಸನ್ನಳಾದ ದೇವತೆ ಲಕ್ಷ್ಮೀ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ಮಾಸದ ಹುಣ್ಣಿಮೆಯ ನಂತರದ ಶುಕ್ರವಾರ ತನ್ನನ್ನು ಪೂಜಿಸುವಂತೆ ತಿಳಿಸಿ, ಒಂದು ವೇಳೆ ಈ ಪೂಜೆ ಪರಿಪೂರ್ಣವಾದರೆ ಆಕೆಗೆ ಜೀವನದಲ್ಲಿ ಏನು ಬೇಕೋ ಅವೆಲ್ಲಾ ಸಿಗುವ ವರ ನೀಡುತ್ತೇನೆ ಎಂದು ವಾಗ್ಧಾನ ನೀಡಿದಳು.

ಈ ಕೋರಿಕೆಯನ್ನು ಪರಿಪೂರ್ಣವಾಗಿ ನೆರವೇರಿಸಿದ ಚಾರುಮತಿ ತನ್ನೊಂದಿಗೆ ತನ್ನ ನೆರೆಹೊರೆಯ ಮತ್ತು ಆಪ್ತರನ್ನೂ ಸೇರಿಸಿಕೊಂಡಳು. ಪೂಜೆ ಪೂರ್ಣವಾದ ಬಳಿಕ ಆಕೆಯ ಜೊತೆಗಿದ್ದ ಎಲ್ಲಾ ಮಹಿಳೆಯರ ಮೈ ಮೇಲೆ ಬಂಗಾರದ ಆಭರಣಗಳು ಪ್ರತ್ಯಕ್ಷವಾಗಿದ್ದು ಮಾತ್ರವಲ್ಲ ಅವರ ಮನೆಗಳೂ ಚಿನ್ನದ್ದಾದವು. ಈ ಎಲ್ಲಾ ಮಹಿಳೆಯರು ತಮ್ಮ ಜೀವಮಾನದುದ್ದಕ್ಕೂ ಪೂಜೆಯನ್ನು ನೆರವೇರಿಸುತ್ತಾ ಉತ್ತಮ ಜೀವನವನ್ನು ಪಡೆದರು.

ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗೃಹಿಣಿಯರು ಈ ವ್ರತಾಚರಣೆ ಮಾಡುತ್ತಾ ಬಂದಿದ್ದಾರೆ. ಹಾಗಿದ್ದರೆ ವರಮಹಾಲಕ್ಷ್ಮೀ ಪೂಜೆಯನ್ನು ಹೆಲ್ಗೆ ಮಾಡಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ...

ವರಮಹಾಲಕ್ಷ್ಮೀ ಹಬ್ಬದ ಪೂಜಾ ವಿಧಿ-ವಿಧಾನ:
ವರಮಹಾಲಕ್ಷ್ಮೀ ಎಂದರೆ ಬೇಕಾದ ವರ ಕೊಡುವವಳು. ಲಕ್ಷ್ಮೀ ಶುದ್ಧತೆಯ ಸಂಕೇತ. ಗೋಧೂಳಿ ಸಮಯದಲ್ಲಿ ಲಕ್ಷ್ಮೀ ಪೂಜೆ ಮಾಡಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ವರಮಹಾಲಕ್ಷ್ಮೀ ಹಬ್ಬದ ದಿನದಂದು ಮುಂಜಾನೆಯೇ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ ತಳಿರು ತೋರಣಗಳಿಂದ ಅಲಂಕರಿಸಿ, ಅಭ್ಯಂಜನ ಮಾಡಿ ಶುಭ್ರವಾದ(ಮಡಿ) ಉಡುಪು ಧರಿಸಿ, ದೇವಿಗೆ ನೈವೇದ್ಯ ತಯಾರಿಸಿ ನಂತರ ಸಣ್ಣ ಬಿಂದಿಗೆ ಅಥವಾ ಬೆಳ್ಳಿ ಚೊಂಬನ್ನು ಕಲಶದ ರೂಪದಲ್ಲಿ ಇಡಬೇಕು. 

ವರಮಹಾಲಕ್ಷ್ಮೀ ಪೂಜೆಯಲ್ಲಿ 'ಕಲಶ' ಪ್ರಮುಖವಾದುದು, ಕಲಶ ಲಕ್ಷ್ಮೀಯ ಪ್ರತೀಕ. ಕಲಶವನ್ನು ಮಣ್ಣಿನ ಚಿಕ್ಕ ಗಡಿಗೆ, ತಾಮ್ರದ ಅಥವಾ ಬೆಳ್ಳಿಯ ತಂಬಿಗೆ ಹೀಗೆ ನಿಮಗೆ ಅನುಕೂಲಕರ ರೀತಿಯಲ್ಲಿ ಕಲಶವನ್ನು ಇರಿಸಬಹುದು. ಮೊದಲು ಒಂದು ಬಾಳೆ ಎಲೆಯನ್ನು ಇರಿಸಿ ಅದರಲ್ಲಿ ಅಕ್ಕಿಯನ್ನು ಹರಡಿ. ನಂತರ ಅದರ ಮೇಲೆ ಕಲಶವನ್ನು ಕೂರಿಸಿ.  ಕಲಶದಲ್ಲಿ ನೀರನ್ನು ತುಂಬಿಸಿ ಕೆಲವರ ಮನೆಯಲ್ಲಿ ಕಲಶದಲ್ಲಿ ನೀರು ತುಂಬಿ ವಿಳ್ಳೆದೆಲೆ ಇರಿಸುತ್ತಾರೆ. ಮತ್ತೆ ಕೆಲವರು ಧಾನ್ಯಗಳನ್ನು ತುಂಬಿ ಕಲಶ ಇರಿಸುತ್ತಾರೆ. ನಿಮ್ಮ ಮನೆಯ ಸಂಪ್ರದಾಯದಂತೆ ಕಲಶದಲ್ಲಿ ಪದಾರ್ಥವನ್ನು ತುಂಬಿಡಿ.
 
ನಂತರ ಕಲಶದಲ್ಲಿ ಮಾವಿನ ಎಲೆ ಹಾಗೂ ವಿಳ್ಳೆದೆಲೆ ಇರಿಸಿ, ಅದರ ಮೇಲೆ ಅರಿಶಿನ ಹಚ್ಚಿದ ತೆಂಗಿನ ಕಾಯಿ ಇಡಲಾಗುತ್ತದೆ(ಮುಖವಾಡ ಹಾಕಿ ಅಲಂಕರಿಸಲು ಇಚ್ಚಿಸುವವರು ಅದನ್ನೂ ಮಾಡಬಹುದು). ಬಳಿಕ ಕಲಶಕ್ಕೆ ಸೀರೆ ಉಡಿಸಿ, ಬಳೆ ತೊಡಿಸಿ ಅವರವರ ಯಥಾಶಕ್ತಿಯಂತೆ ಒಡವೆಗಳನ್ನು ಹಾಕಿ ಅಲಂಕರಿಸಬಹುದು. ವರಮಹಾಲಕ್ಷ್ಮೀಯನ್ನು ಚಿನ್ನ, ಬೆಳ್ಳಿ, ವಿಧ ವಿಧದ ಹೂಗಳನ್ನು ಹಾಕಿ ಅಲಂಕರಿಸುತ್ತಾರೆ. 

ಮಡಿಯುಟ್ಟು  ಕಳಸ ಸ್ಥಾಪನೆ ಮಾಡಿ,  ಆ ನಂತರ ಗೋಮಯವನ್ನಿಟ್ಟು ಪೂಜೆ ಮಾಡುವುದು ಅತಿ ಮುಖ್ಯ. ಲಕ್ಷ್ಮಿಗೆ ರೇಷ್ಮೆ ವಸ್ತ್ರವೆಂದರೆ ಬಹಳ ಪ್ರಿಯ ಇದರ ಜೊತೆಗೆ ಕಳಸಕ್ಕೆ ಬಂಗಾರದ ಒಡವೆ ಇರಿಸಿ ಪೂಜಿಸಿದರೆ ತುಂಬಾ ಒಳ್ಳೆಯದು. . ಲಕ್ಷ್ಮಿ ದೇವಿಗೆ ತುಪ್ಪದ ದೀಪ ಎಂದರೆ ತುಂಬಾ ಇಷ್ಟ ಅದರಲ್ಲೂ ಐದು ಇಂಚಿನ ಐದು ಬತ್ತಿಯ ದೀಪವನ್ನು ಹಚ್ಚಿ ಪೂಜೆ ಮಾಡಿದರೆ ಬಹಳ ಶ್ರೇಷ್ಠ. 

ವರಮಹಾಲಕ್ಷ್ಮೀಗೆ ಹೂಗಳೆಂದರೆ ಅಚ್ಚು ಮೆಚ್ಚು. ಅದರಲ್ಲೂ ಕಮಲದ ಹೂ ಹಾಗೂ ಬಿಲ್ವಪತ್ರೆ ಎಂದರೆ ತಾಯಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ ವರಮಹಾಲಕ್ಷ್ಮೀ ಅನ್ನು ಆರಾಧಿಸುವಾಗ....

ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ... ಎಂದು ಭಕ್ತಿಯಿಂದ ಪೂಜಿಸಲಾಗುತ್ತದೆ.

ಇದಲ್ಲದೆ ಬಿಲ್ವ ವೃಕ್ಷದಲ್ಲಿ ಲಕ್ಷ್ಮೀ ನೆಲಸಿದ್ದಾಳೆ ಎಂದು ನಂಬಲಾಗುತ್ತದೆ. ಬಿಲ್ವಪತ್ರೆಯಿಂದ ಲಕ್ಷ್ಮಿಯನ್ನು ಪೂಜಿಸಿದರೆ ತಾಯಿ ಒಲಿಯುತ್ತಾಳೆ ಎನ್ನಲಾಗುತ್ತದೆ.

ಪೂಜೆಗೆ ಹಸಿರು ಬಣ್ಣದ ರವಿಕೆ ಬಟ್ಟೆ, ಹಸಿರು ಬಳೆ, ಐದು ಬಗೆಯ ಹಣ್ಣುಗಳು, ನೆವೇದ್ಯಕ್ಕೆ ಸಜ್ಜಿಗೆ ಅಥವಾ ಹೆಸರು ಬೆಳೆ ಪಾಯಸ ತಯಾರಿಸಿ ಇಡಿ. ನಂತರ ಪುರೋಹಿತರು ಇಲ್ಲವೇ ನಿಮ್ಮ ಮನೆಯ ಹಿರಿಯರ ಮಾರ್ಗದರ್ಶನದಂತೆ ಪೂಜೆ ಮಾಡಿ. ವರಮಹಾಲಕ್ಷ್ಮೀ ಪೂಜೆಯಲ್ಲಿ ಶ್ಲೋಕಕ್ಕೆ ವಿಶೇಷ ಮಹತ್ವವಿದ್ದು ಬಹಳ ಮಂಗಳಕರವಾದ ಲಕ್ಷ್ಮೀ ಅಷ್ಟೋತ್ತರ ಮತ್ತು ಲಕ್ಷ್ಮೀ ಸಹಸ್ರನಾಮವನ್ನು ತಪ್ಪದೆ ಪಟಿಸಿ. 

ಪೂಜೆಯ ಸಮಯದಲ್ಲಿ ಒಬ್ಬಟ್ಟು ಮತ್ತು ಇತರ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಬಳಿಕ ಮನೆಯವರೆಲ್ಲರೂ ಪ್ರಸಾದದ ರೂಪದಲ್ಲಿ ಸೇವಿಸಬಹುದು. ಕೆಲವು ಕಡೆಗಳಲ್ಲಿ ಈ ದಿನ ಉಪವಾಸದ ದಿನವಾಗಿ ಆಚರಿಸಿ ಪೂಜೆ ಸಂಪನ್ನಗೊಂಡ ಬಳಿಕವೇ ಆಹಾರ ಸ್ವೀಕರಿಸಲಾಗುತ್ತದೆ.

ಸೂರ್ಯೋದಯಕ್ಕೂ ಮೊದಲು  ಏನಾದರೂ ಒಂದು ನೈವೇದ್ಯವನ್ನು ಇಟ್ಟು ಪೂಜೆ ಮಾಡಿದರೆ ತುಂಬಾ ಒಳ್ಳೆಯದು. ಇಡೀ ದಿನ ಉಪವಾಸವಿದ್ದು ಉಪ್ಪು, ಹುಳಿ,   ಖಾರವನ್ನು ಸೇವಿಸುವಂತಿಲ್ಲ. ಲಘುವಾಗಿ ಉಪಾಹಾರವನ್ನು ಸೇವಿಸಬಹುದು.

ಸಂಧ್ಯಾ ಕಾಲದಲ್ಲಿ ಐದು ಜನ (ಅನುಕೂಲವಾದರೆ ಹೆಚ್ಚು ಜನರನ್ನು ಕರೆಯಬಹುದು) ಮುತ್ತೈದೆಯರಿಗೆ ಕುಂಕುಮ ತಾಂಬೂಲವನ್ನು ನೀಡಬೇಕು. ನಿಮ್ಮನ್ನು ಯಾರಾದರೂ ಕುಂಕುಮಕ್ಕೆ ಕರೆದರೆ ಅವರ ಮನೆಗೆ ಹೋಗಿ ನೀವು ಕೂಡ ಕುಂಕುಮ ಮತ್ತು ತಾಂಬೂಲವನ್ನು ಸ್ವೀಕರಿಸಿ ಬನ್ನಿ.   

ಸಾಮಾನ್ಯವಾಗಿ ಮಹಿಳೆಯರು ಮುಂಜಾನೆಯಿಂದ ಪೂಜೆ ಸಂಪನ್ನಗೊಳ್ಳುವವರೆಗೆ ಉಪವಾಸವಿರುತ್ತಾರೆ. ಉದ್ಯೋಗದಲ್ಲಿರುವವರು, ಗರ್ಭಿಣಿಯರು, ರೋಗಿಗಳು ಅಥವಾ ವೈದ್ಯಕೀಯ ಆರೈಕೆಯಲ್ಲಿರುವ ಮಹಿಳೆಯರು ಉಪವಾಸದಿಂದ ವಿನಾಯಿತಿ ಪಡೆಯಬಹುದು.

(ಪೂಜೆಗೆ ಸೂಕ್ತವಾದ ಒಂಬತ್ತು ತಿಂಡಿಗಳು: ಒಬ್ಬಟ್ಟು, ಸಿಹಿದೋಸೆ, ಮೆದುವಡೆ, ಶಂಕರಪಾಳೆ, ಸಕ್ಕರೆ ಪೊಂಗಲ್, ಸುಂದಲ್, ಮೋದಕ, ಹೆಸರು ಬೇಳೆ ಪಾಯಸ, ಸಜ್ಜಿಗೆ ಮತ್ತು ಲಡ್ಡು. ನೆನಪಿಡಿ: ಯಾವುದೇ ಕಾರಣಕ್ಕೂ ಲಕ್ಷ್ಮಿದೇವಿಗೆ ಪುಳಿಯೊಗ್ರೆಯನ್ನು ಇಡಲೇಬಾರದು)

Trending News