ರಾಜ್ಯದ 2500ಕ್ಕೂ ಹೆಚ್ಚು ಸೆಕ್ಯೂರಿಟಿ ಏಜೆನ್ಸಿಗಳಲ್ಲಿ ಅರ್ಧದಷ್ಟು ಪರವಾನಗಿಯೇ ಇಲ್ಲ!

ಬಿಹಾರ, ಉತ್ತರಪ್ರದೇಶ, ರಾಜಸ್ತಾನ ಸೇರಿ ಈಶಾನ್ಯ ಭಾಗದ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಅನೇಕರು ಅಪಾರ್ಟ್‌ಮೆಂಟ್ಸ್, ಕಂಪನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸಕ್ಕೆ ಸೇರುತ್ತಾರೆ. ಆದರೆ ಸೆಕ್ಯೂರಿಟಿ ಏಜೆನ್ಸಿಗಳು ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರುತ್ತಿವೆ ಎಂಬ ಆರೋಪವಿದೆ. 

Written by - VISHWANATH HARIHARA | Edited by - Bhavishya Shetty | Last Updated : Jul 16, 2022, 12:02 PM IST
  • ಸೆಕ್ಯೂರಿಟಿ ಗಾರ್ಡ್‌ಗಳು ಕ್ರೈಂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ
  • ಸೆಕ್ಯೂರಿಟಿ ಏಜೆನ್ಸಿಗಳು ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರುತ್ತಿವೆ
  • ಹಣದಾಸೆಗಾಗಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ
ರಾಜ್ಯದ 2500ಕ್ಕೂ ಹೆಚ್ಚು ಸೆಕ್ಯೂರಿಟಿ ಏಜೆನ್ಸಿಗಳಲ್ಲಿ ಅರ್ಧದಷ್ಟು ಪರವಾನಗಿಯೇ ಇಲ್ಲ! title=
security agencies

ಬೆಂಗಳೂರು: ದೇಶದ ಹಲವೆಡೆಯಿಂದ ನಗರಕ್ಕೆ ಬಂದು ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸಕ್ಕೆ ಸೇರಿಕೊಂಡು ಕಾಲಕ್ರಮೇಣ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನೆ-ಕಚೇರಿ ಕಾಯಬೇಕಾದ ಭದ್ರತಾ ಸಿಬ್ಬಂದಿಗಳೇ ಖದೀಮರಾಗುತ್ತಿದ್ದಾರೆ. ಮತ್ತೊಂದೆಡೆ ಕಮೀಷನ್ ಆಸೆಗಾಗಿ ಸೆಕ್ಯೂರಿಟಿ ಏಜೆನ್ಸಿಗಳು ಉದ್ಯೋಗಿಗಳ ಪೂರ್ವಾಪರ ಸೇರಿ ಸೂಕ್ತ ದಾಖಲಾತಿ ಪಡೆದುಕೊಳ್ಳದೇ ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ಇದು ಸೆಕ್ಯೂರಿಟಿ ಗಾರ್ಡ್‌ಗಳು ಕ್ರೈಂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರಮುಖ ಕಾರಣವಾಗುತ್ತಿದೆ. 

ಬಿಹಾರ, ಉತ್ತರಪ್ರದೇಶ, ರಾಜಸ್ತಾನ ಸೇರಿ ಈಶಾನ್ಯ ಭಾಗದ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಅನೇಕರು ಅಪಾರ್ಟ್‌ಮೆಂಟ್ಸ್, ಕಂಪನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸಕ್ಕೆ ಸೇರುತ್ತಾರೆ. ಆದರೆ ಸೆಕ್ಯೂರಿಟಿ ಏಜೆನ್ಸಿಗಳು ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರುತ್ತಿವೆ ಎಂಬ ಆರೋಪವಿದೆ. 

ಇದನ್ನೂ ಓದಿ: ವೆಂಕಟೇಶ್‌ ಅಯ್ಯರ್‌-ಪ್ರಿಯಾಂಕಾ ಜವಾಲ್ಕರ್ ಲವ್ವಿಡವ್ವಿ! ವದಂತಿಗೆ ಪುರಾವೆ ನೀಡುತ್ತಿದೆ ಈ ಕಮೆಂಟ್‌

ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಉದ್ಯೋಗಿಯ ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಪೊಲೀಸರಿಂದ ವೆರಿಫೀಕೇಷನ್ ಸರ್ಟಿಫಿಕೇಟ್‌ನ್ನು ಪಡೆದಿರಬೇಕು. ಆದರೆ ಬಹುತೇಕ ಏಜೆನ್ಸಿಗಳು ಕಂಪನಿಗಳಿಂದ‌ ಹೆಚ್ಚುವರಿ ಹಣ ಪಡೆದು ವ್ಯಕ್ತಿಯ ಹಿನ್ನೆಲೆ ತಿಳಿದುಕೊಳ್ಳದೆ ಕಡಿಮೆ ವೇತನ ನಿಗದಿಪಡಿಸಿ ಸೆಕ್ಯೂರಿಟಿಗಳಾಗಿ ನಿಯೋಜಿಸುತ್ತಿವೆ. ಕಡಿಮೆ ಸಂಬಳ ಪಡೆಯುವ ಸೆಕ್ಯೂರಿಟಿಗಳು ಹಣದಾಸೆಗಾಗಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ದೇಶದ ವಿವಿಧ ರಾಜ್ಯಗಳಿಂದ  ಸಾವಿರಾರು ವಲಸೆ ಕಾರ್ಮಿಕರು‌ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ.‌‌ ಈ ಪೈಕಿ ಹೌಸ್ ಕೀಪಿಂಗ್, ಸೆಕ್ಯೂರಿಟಿ ಕೆಲಸಗಳಲ್ಲಿ ಹೆಚ್ಚಿನ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಇತ್ತ ಏಜೆನ್ಸಿಗಳು ಕೆಲಸಕ್ಕಾಗಿ ಸ್ಥಳೀಯರನ್ನು ನೇಮಿಸಿದ್ರೆ ಹೆಚ್ಚಿನ ವೇತನ ನೀಡಬೇಕಾಗುತ್ತದೆ ಅಂತಾ ಸ್ಥಳೀಯರ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಹೊರ ರಾಜ್ಯದವರು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಾರೆ. ಅಲ್ಲದೆ ಯಾವುದೇ ರೀತಿಯ ಬೇಡಿಕೆ ಇಡೋದಿಲ್ಲ ಎಂಬ ಮನೋಭಾವ ಬೆಳೆಸಿಕೊಂಡಿದ್ದಾರೆ. ಹೀಗಾಗಿಯೇ ಹಲವು ಮನೆ, ಕಂಪನಿ ಮಾಲೀಕರು ಊರು, ವಿಳಾಸ ಅರಿಯದೇ ಕೆಲಸ ಕೊಡುತ್ತಿದ್ದಾರೆ. ಇದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುವ ಕೆಲವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 2500ಕ್ಕೂ ಹೆಚ್ಚು‌ ಸೆಕ್ಯೂರಿಟಿ ಏಜೆನ್ಸಿಗಳಿವೆ. ಈ ಪೈಕಿ ಅರ್ಧದಷ್ಟು ಏಜೆನ್ಸಿಗಳು ಪರವಾನಗಿಯನ್ನೇ ಪಡೆದುಕೊಂಡಿಲ್ಲ. ಸದ್ಯ ರಾಜ್ಯದಲ್ಲಿ ಅಂದಾಜು 2.50 ಲಕ್ಷ ಸೆಕ್ಯೂರಿಟಿಗಳಿದ್ದು, ಇದರಲ್ಲಿ ಅರ್ಧದಷ್ಟು ಭದ್ರತಾ ಸಿಬ್ಬಂದಿ ಬೆಂಗಳೂರು ನಗರದಲ್ಲಿಯೇ ಕೆಲಸ‌ ಮಾಡುತ್ತಿದ್ದಾರೆ. ಖಾಸಗಿ ಸುರಕ್ಷತಾ ಸಂಸ್ಥೆಗಳ ನಿಯಂತ್ರಣ ಕಾಯ್ದೆ 2005ರ‌ ಪ್ರಕಾರ ಏಜೆನ್ಸಿ ತೆರೆಯಬೇಕಾದರೆ ಗೃಹ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಅನಧಿಕೃತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೆಕ್ಯೂರಿಟಿ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪವಿದೆ. ಗೊತ್ತು-ಗುರಿ ಇಲ್ಲದವರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿರುವುದರಿಂದ ಕೆಲ‌ ಉದ್ಯೋಗಿಗಳು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ‌. ಅಲ್ಲದೆ‌‌‌ ಪರವಾನಗಿ ಪಡೆದುಕೊಳ್ಳದ‌ ಅನಧಿಕೃತ ಏಜೆನ್ಸಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ಸೆಕ್ಯೂರಿಟಿ ಸರ್ವೀಸ್ ಅಸೋಸಿಯೇಷನ್ ಮಾಜಿ‌ ಅಧ್ಯಕ್ಷ  ಬಿ.ಎಂ.ಶಶಿಧರ್ ಬೇಸರ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಕಾವೇರಿ ಆರ್ಭಟ..! ಮೆಟ್ಟೂರು ಜಲಾಶಯ ಭರ್ತಿಗೆ ಅರ್ಧ ಅಡಿ ಬಾಕಿ

ರಾಜಧಾನಿಗೆ ಬರುವ ಅನೇಕರು ಸೆಕ್ಯೂರಿಟಿಗಳಾಗಿ ನೇಮಕಗೊಂಡು ದುಡ್ಡಿನ ಆಸೆ, ಮೋಜು ಮಸ್ತಿಗಾಗಿ ಕಳ್ಳತನ ಸೇರಿದಂತೆ ಇನ್ನಿತರೆ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ‌. ಇನ್ನು ಸೆಕ್ಯೂರಿಟಿ ಗಾರ್ಡ್‌ಗಳ ಇತ್ತೀಚಿನ ಅಪರಾಧ ಕೃತ್ಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. 

1) ಬಾಲಕನನ್ನ ಕಿಡ್ನ್ಯಾಪ್ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ನೇಪಾಳ ಮೂಲದ ಗೌರವ್ ಸಿಂಗ್ ಸೇರಿ ಮೂವರನ್ನು ಜೂನ್‌ನಲ್ಲಿ  ಬಂಧಿಸಿದ್ದ ಹೆಣ್ಣೂರು ಪೊಲೀಸರು
 
2) ಜುಲೈ 5ರಂದು ಕಳ್ಳನೆಂದು ವ್ಯಕ್ತಿಗೆ ರಾಡ್‌ನಿಂದ ಹೊಡೆದು ಕೊಲೆ. ಅಸ್ಸೋಂ ಮೂಲದ ಸೆಕ್ಯೂರಿಟಿ ಗಾರ್ಡ್‌ನಿಂದ ಕೃತ್ಯ- ಹೆಚ್ಎಎಲ್ ಪೊಲೀಸರಿಂದ ಬಂಧನ

3) ಜುಲೈ 6ರಂದು ಜೆ.ಬಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಮಾಲೀಕನ ತಾಯಿಯ ಕೈಕಾಲು ಕಟ್ಟಿ ಚಿನ್ನಾಭರಣ, ಹಣ ದೋಚಿದ್ದ ಆರೋಪಿಗಳು. ಸೆಕ್ಯೂರಿಟಿಗಳಾಗಿ ಸೇರಿ ಕೃತ್ಯ ಎಸಗಿದ್ದ ನೇಪಾಳ ಮೂಲದ ಪ್ರತಾಪ್ ಸಿಂಗ್ ಸೋನು ದಂಪತಿ ಬಂಧನ

4) ಐಷಾರಾಮಿ ಜೀವನಕ್ಕಾಗಿ 35ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿದ್ದ ಸೆಕ್ಯೂರಿಟಿ ಗಾರ್ಡ್ ಶ್ರೀನಿವಾಸ್. ಜುಲೈ 13ರಂದು ಬಂಧಿಸಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News