ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನ ಆಮದು ರಾಜಕಾರಣಿ ಎಂಬುದನ್ನು ಮರೆತಿದ್ದಾರೆ. ಅಲ್ಲದೆ, ಸೋನಿಯಾ ಗಾಂಧಿ ಸಹ ಇಂಪೋರ್ಟೆಡ್ ಯಾರು ಈ ನೆಲದ ಮಕ್ಕಳು ಎಂಬುದನ್ನು ಅವರು ನೆನಪಿಡಬೇಕು ಎಂದು ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ವಿಜಯನಗರ, ಮಹಾಲಕ್ಷ್ಮಿ ಲೇಔಟ್ನಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಆ ಸಮಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ಗೆ ಆಮದಾಗಿ ಬಂದವರು. ಸೋನಿಯಾ ಅವರು ಇಂಪೋರ್ಟೆಡ್, ಇನ್ನೂ ರಾಹುಲ್ ಗಾಂಧಿ ಏನು ಎಂದು ಪ್ರಶ್ನಿಸಿದ ಅವರು, ಯಾರು ಈ ನೆಲದ ಮಕ್ಕಳು ಎಂಬುದನ್ನು ಅರಿತಿರಲಿ ಎಂದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ನಾವೆಲ್ಲಾ ಈ ನೆಲದ ಮಕ್ಕಳು ಇದನ್ನು ತಿಳಿಯದ ಸಿದ್ದರಾಮಯ್ಯ ಸುಮ್ಮನೆ ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೆ, ನಮ್ಮದೊಂದು ರಾಜ್ಯ ಇದೆ, ನಮ್ಮದೊಂದು ದೇಶ ಇದೆ. ಸೋನಿಯಾ ಮತ್ತು ರಾಹುಲ್ ಗಾಂಧಿ ಯಾವ ರಾಜ್ಯಕ್ಕೆ ಸೇರಿದವರು ಎಂದು ಅನಂತ್ ಕುಮಾರ್ ಪ್ರಶ್ನಿಸಿದರು.
ಜೆಡಿಎಸ್-ಕಾಂಗ್ರೆಸ್ ನಡುವೆ ಒಳ ಮತ್ತು ಹೊರ ಒಪ್ಪಂದ
ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದ ಇದೆ. ಬಿಬಿಎಂಪಿ ಯಲ್ಲಿ ಜೊತೆಯಾಗಿ ಅವರು ಆಡಳಿತ ನಡೆಸುತ್ತಿರುವುದು ಇದಕ್ಕೆ ಉದಾಹರಣೆ. ಸಿದ್ದರಾಮಯ್ಯ ಎಷ್ಟು ಸಲ ದೇವೇಗೌಡರ ಮನೆಗೆ ಹೋಗಿಲ್ಲ? ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಒಳ ಒಪ್ಪಂದ ಮತ್ತು ಹೊರ ಒಪ್ಪಂದ ಎರಡೂ ಇದೆ ಎಂದು ಲೇವಡಿ ಮಾಡಿದರು.
ಬೆಂಗಳೂರಿನ ಬಹಳಷ್ಟು ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ!
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನ ಯಾವುದೇ ಕಾರಣಕ್ಕೂ ತಪ್ಪಿಸಲು ಸಾಧ್ಯವಿಲ್ಲ. ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಇದನ್ನು ನೋಡಿದಲ್ಲಿ ಬೆಂಗಳೂರಿನ ಬಹಳಷ್ಟು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದು ಅನಾತ್ ಕುಮಾರ್ ಹೇಳಿದರು.