ಮದ್ದೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದ ಮಾಜಿ ಸಚಿವ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಇಂದು ಮದ್ದೂರು ಕ್ಷೇತ್ರದ ದೊಡ್ಡರಸಿನಕೆರೆ ಮತಗಟ್ಟೆಯಲ್ಲಿ ತಮ್ಮ ಸಂಬಂಧಿ ಜೊತೆ ಬಂದು ಮತ ಚಲಾಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಇವತ್ತು ಆ ಪಕ್ಷ ಈ ಪಕ್ಷ ಎನ್ನುವವರು ನಾಳೆ ನಾಳೆಯಿಂದ ಎಲ್ಲರೂ ಒಂದೇ ಎನ್ನುತ್ತಾರೆ. ನಾನು ನನ್ನ ಹೆಂಡತಿ ಮಕ್ಕಳನ್ನು ಕರೆತಂದು ಚುನಾವಣೆಗೆ ನಿಲ್ಲಿಸುವುದಿಲ್ಲ. ಬೇರೆಯವರ ಮಕ್ಕಳು ಬೆಳೆಯಲಿ. ನಮ್ಮ ಮಕ್ಕಳನ್ನು ಬೆಳೆಸೋದು ಗೊತ್ತಿದೆ. ಇನ್ನು, ನಾನು ಮಂಡ್ಯಕ್ಕೆ ಬರಲೇಬೇಕು. ಬರದೇ ಎಲ್ಲಿ ಹೋಗಲಿ? ಮಂಡ್ಯಕ್ಕೆ ಬರುತ್ತಲೇ ಇರುತ್ತೇನೆ ಎಂದು ಅಂಬರೀಷ್ ಹೇಳಿದ್ದಾರೆ.
ನಿಮ್ಮ ಬೆಂಬಲ ಯಾರಿಗೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಂಬರೀಶ್, ವೋಟು ಹಾಕಲೇ ಬೇಕು ಹಾಕಿದ್ದೇನೆ. ಯಾರಿಗೆ ಅಂತ ಹೇಳೊಲ್ಲ. ಇನ್ನು ನಾನು ರಾಜಕೀಯದಲ್ಲಿ ಮುಂದುವರಿಯುವುದಿಲ್ಲ. ಹೊಸ ಹುಡುಗರು ಬೆಳೆಯಲಿ. ಬೆಳೆದು ಜಿಲ್ಲೆ ಕಾಪಾಡಲಿ. ಜಿಲ್ಲೆ ಅಭಿವೃದ್ಧಿಗೆ ನಾನು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಜನರೂ ನನ್ನ ಮೇಲೆ ಪ್ರೀತಿ ತೋರಿಸಿದ್ದಾರೆ. ಅಂಬರೀಷ್ ಹೆಸರಲ್ಲೇ 10 ಎಂಎಲ್ಎ ಶಕ್ತಿ ಇದೆ. ಅಷ್ಟೇ ಸಾಕು ಎಂದು ಅಂಬರೀಶ್ ಹೇಳಿದರು.