ಕೃಷಿ ವಲಯದ ಸಾಧನೆಗೆ ಮೋದಿಗೆ 'F' ಗ್ರೇಡ್ ನೀಡಿದ ರಾಹುಲ್

ಕರ್ನಾಟಕ ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಿಪೋರ್ಟ್‌ ಕಾರ್ಡ್‌ ನೀಡಿ ಅದರಲ್ಲಿ ಮೋದಿ ಸರ್ಕಾರಕ್ಕೆ 'F' ಗ್ರೇಡ್ ನೀಡಿದ್ದಾರೆ. 

Last Updated : May 3, 2018, 04:16 PM IST
ಕೃಷಿ ವಲಯದ ಸಾಧನೆಗೆ ಮೋದಿಗೆ 'F' ಗ್ರೇಡ್ ನೀಡಿದ ರಾಹುಲ್  title=

ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಟ್ವೀಟ್ ವಾರ ಮುಂದುವರೆದಿದೆ. ಇಂದು ಕೂಡಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸಿದ್ದು, ಕರ್ನಾಟಕ ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಿಪೋರ್ಟ್‌ ಕಾರ್ಡ್‌ ನೀಡಿ ಅದರಲ್ಲಿ ಮೋದಿ ಸರ್ಕಾರಕ್ಕೆ 'F' ಗ್ರೇಡ್ ನೀಡಿದ್ದಾರೆ. 

ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೈತರ 8,500 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಿದೆ. ಇದರಲ್ಲಿ ಕೇಂದ್ರ ಸರಕಾರದ ಕೊಡುಗೆ ಶೂನ್ಯ. ಆದರೂ, ಪ್ರಧಾನಿ ಕ್ರಾಪ್ ಪ್ರೊಟೆಕ್ಷನ್ ಇನ್ಶುರೆನ್ಸ್ ಯೋಜನೆ ಕುರಿತು ಮಾತನಾಡುತ್ತಾ ರೈತರಿಗೆ ಈ ಯೋಜನೆಯಡಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ ಎಂದಿದ್ದಾರೆ ಎಂದು ರಾಹುಲ್ ಕಿಡಿ ಕಾರಿದ್ದಾರೆ. 

ರಾಹುಲ್ ಗಾಂಧಿ ನೀಡಿರುವ ಪ್ರಧಾನಿ ಮೋದಿ ಅವರ ರಿಪೋರ್ಟ್‌ ಕಾರ್ಡ್‌ ಹೀಗಿದೆ

ರಾಜ್ಯ: ಕರ್ನಾಟಕ, ವಿಷಯ: ಕೃಷಿ.

1. ಕರ್ನಾಟಕ ಸರ್ಕಾರ ಮಂಜೂರು ಮಾಡಿರುವ 8,500 ಕೋಟಿ ರೂ. ಕೃಷಿ ಸಾಲ ಮನ್ನಾಗೆ ಮೋದಿ ಕೊಡುಗೆ : ಶೂನ್ಯ.

2. ಪ್ರಧಾನಿಯವರ ಬೆಳೆ ವಿಮೆ ಯೋಜನೆ: ರೈತರಿಗೆ ಸಂಕಷ್ಟ; ಖಾಸಗಿ ವಿಮಾ ಕಂಪನಿಗಳಿಗೆ ಲಾಭ.

3. ಕರ್ನಾಟಕ ರೈತರಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) + 50% ಇಲ್ಲ.

               ಗ್ರೇಡ್‌- ಎಫ್

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ಮೋದಿ ಅವರು, ಮೇ 2ರಂದು ಬೆಳಿಗ್ಗೆ ಬಿಜೆಪಿ ಕರ್ನಾಟಕ ರೈತ ಮೋರ್ಚಾ ಕಾರ್ಯಕರ್ತರೊಂದಿಗೆ ನಮೋ ಆಪ್ ಮೂಲಕ ನಡೆಸಿದ ಸಂವಾದದಲ್ಲಿ ಮಾತನಾಡುತ್ತಾ ಕರ್ನಾಟಕದಲ್ಲಿ ಫಸಲ್ ಬಿಮಾ ಯೋಜನೆಯ ಅನುಷ್ಟಾನದ ಬಗ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರಾಸಕ್ತಿ ತೋರಿದೆ. ಒಂದು ವೇಳೆ ಬರಗಾಲದಲ್ಲಿ ರಾಜ್ಯ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡಿದ್ದಿದ್ದರೆ ರೈತರ ಹಲವಾರು ಸಂಕಷ್ಟಗಳಿಗೆ ಪರಿಹಾರ ಸಿಗುತ್ತಿತ್ತು. ಕರ್ನಾಟಕದಲ್ಲಿನ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಯನ್ನು ಜನರಿಗೆ ಕಲ್ಪಿಸುವ ಕೆಲಸಮಾಡದೆ ಕಾಂಗ್ರೆಸ್ ರೈತರನ್ನು ಕಡೆಗಣಿಸಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ದಾಳಿ ನಡೆಸಿದ್ದಾರೆ. 

Trending News