ಕಲಬುರ್ಗಿ : ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ತಮಗೆ ಆ ಸ್ಥಾನ ಬೇಡ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ವಲಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಮತ್ತೆ ಚರ್ಚೆಯಾಗುತ್ತಿದೆ. ಒಂದೆಡೆ ದಲಿತ ಸಿಎಂ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷದ ಹೈಕಮ್ಯಾಂಡ್ ನಿರ್ಧಾರಕ್ಕೆ ತಾವು ಬದ್ಧ. ಹೈಕಮ್ಯಾಂಡ್ ದಲಿತ ಮುಖ್ಯಮಂತ್ರಿ ನಿರ್ಧಾರ ಕೈಗೊಂಡರೆ ತಮ್ಮ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿರುವುದು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.
ದಲಿತ ಸಿಎಂಗಾಗಿ ಸ್ಥಾನ ಬಿಟ್ಟುಕೊಡಲು ಸಿದ್ಧ : ಸಿದ್ದರಾಮಯ್ಯ
ಈ ಸಂಬಂಧ, ಇಂದು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, "ನಾನು ಪಕ್ಷಕ್ಕಾಗಿ ಬಹಳ ನಿಷ್ಠೆಯಿಂದ ದುಡಿದಿದ್ದೇನೆ. ನನ್ನ ಕಾರ್ಯವನ್ನು ಒಪ್ಪಿ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ಒಳ್ಳೆಯದು. ಈ ಹಿಂದೆಯೂ ದಲಿತ ಸಿಎಂ ವಿಚಾರ ಪ್ರಸ್ತಾಪವಾಗಿತ್ತು. ಆಗಲೂ ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ದೆ. ಅಷ್ಟಕ್ಕೂ ನಾನೇನು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಜಿ ಹಾಕಿಲ್ಲ" ಎಂದು ಖಾರವಾಗಿ ನುಡಿದರು.
ಬ್ರಹ್ಮ ಬಂದು ಹೇಳಿದ್ರೂ ಚುನಾವಣೆಗೆ ನಿಲ್ಲಲ್ಲ: ಸಿದ್ದರಾಮಯ್ಯ
ಚುನಾವಣೆ ಮುಗಿಯುವವರೆಗೂ ಇಲ್ಲದ ದಲಿತ ಮುಖ್ಯಮಂತ್ರಿ ಕುರಿತಾದ ಚರ್ಚೆ ಇದೀಗ ಕಾಂಗ್ರೇಸ್ ಪಕ್ಷದಲ್ಲಿ ಹುಟ್ಟಿಕೊಂಡಿದೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ದಲಿತ ಮುಖ್ಯಮಂತ್ರಿ ಅಭ್ಯರ್ಥಿ ರೇಸ್'ನಲ್ಲಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಕೆ.ಹೆಚ್.ಮುನಿಯಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇದ್ದಾರೆ.