ಬೆಂಗಳೂರು: ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ ಶೀರ್ಷಿಕೆಯೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ 53,000 ಕೋಟಿ ರೂ. ಸಾಲ ಮನ್ನಾ ಮಾಡುವುದು ಜೆಡಿಎಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಣ್ಣಿನ ಮಕ್ಕಳು ಎಂದೇ ಪ್ರಖ್ಯಾತರು. ಈ ಬಾರಿಯ ತಮ್ಮ ಸರ್ಕಾರದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಜೆಡಿಎಸ್ ನಿರ್ಧರಿಸಿದೆ. ಕೃಷಿ ಅಭಿವೃದ್ದಿಗೆ ಸಂಬಂಧಿಸಿದಂತೆ ಜೆಡಿಎಸ್ ಹೊಂದಿರುವ ಮಿಷನ್-ವಿಷನ್ ಗಳು ಇಲ್ಲಿವೆ.
* ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿ ರಚನೆ: ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇಬ್ಬರು ಪ್ರಗತಿಪರ ರೈತರನ್ನು ಒಅಲ್ಗೊಂದ ರೈತರ ಸಲಹಾ ಸಮಿತಿಯನ್ನು ಜೆಡಿಎಸ್ ಸರ್ಕಾರ ರಚಿಸಲಿದೆ. ಪ್ರತಿ ತಿಂಗಳು ಈ ರೈತರ ಸಮಿತಿಯೊಂದಿಗೆ ಚರ್ಚೆ ನಡೆಸಲಿರುವ ಮುಖ್ಯಮಂತ್ರಿಗಳು ಸ್ಥಳೀಯ ಸಮಸ್ಯೆಗಳನ್ನು ಅರಿಯುವುದು. ಈ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ.
* ರೈತರ ಸಾಲ ಮನ್ನಾ: ನಾಡಿನ ರೈತ ಬಾಂಧವರು ಕೃಷಿ ಚಟುವಟಿಕೆಗಳಿಗಾಗಿ ಮಾಡಿರುವ ಎಲ್ಲಾ ಬಗೆಯ ಸಾಲವನ್ನು ಜೆಡಿಎಸ್ ಸರ್ಕಾರ ರಚನೆಯಾದ ಕೇವಲ 24 ಗಂಟೆಗಳಲ್ಲಿ, ಅದೂ ಸಹ ಒಂದೇ ಹಂತದಲ್ಲಿ ಮನ್ನಾ ಮಾಡಲು ಸಂಕಲ್ಪ.
* ಕೃಷಿ ಉತ್ಪಾದನಾ ಯೋಜನಾ ಘಟಕ ರಚನೆ: ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ರಾಜ್ಯದ ಪ್ರತಿ ತಾಲೂಕುಗಳಲ್ಲೂ ಕೃಷಿ ಉತ್ಪಾದನಾ ಯೋಜನಾ ಘಟಕ ರಚಿಸಲು ನಿರ್ಧಾರ.
* ಕೃಷಿ ವಾಣಿಜ್ಯ ಸಂಶೋಧನೆಗೆ ಒತ್ತು: ಕರ್ನಾಟಕದ ಕೃಷಿ ರಂಗವನ್ನು ಜಾಗತಿಕ ಮಟ್ಟದ ಪೈಪೋಟಿಗೆ ಸನ್ನದ್ಧಗೊಳಿಸಲು ಸಕಲ ಕ್ರಮ ಕೈಗೊಳ್ಳುವುದು. ಅದಕ್ಕಾಗಿ ಸಂಶೋಧನೆ ಮತ್ತು ವಿಸ್ತರಣಾ ವ್ಯವಸ್ಥೆಯನ್ನು ಬಳವರ್ಧಿಸಲಾಗುವುದು.
* ಬೆಳೆ ವೈವಿಧ್ಯದ ಮೂಲಕ ರೈತರ ಬದುಕು ಹಸನು ಮಾಡುವ ಉದ್ದೇಶ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸೋಪ್ ಡಿಟರ್ಜೆಂಟ್ ಸಸಿ ಬೆಳೆಯಲು ಪ್ರೋತ್ಸಾಹ, ನಂದಿನಿ ಬ್ರಾಂಡ್ ಮಾದರಿಯಲ್ಲಿ ಎಣ್ಣೆ ಕಾಳುಗಳ ಬೆಳೆಗೆ ಪ್ರೋತ್ಸಾಹ, ಧಾನ್ಯಗಳಿಗೆ ಪ್ರೋತ್ಸಾಹ ಮುಂತಾದ ಯೋಜನೆಗಳಿಗೆ ಸೂಕ್ತ ಕ್ರಮ.
* ಹನಿ ನೀರಾವರಿಯಲ್ಲಿ ಸೋಲಾರ್ ಶಕ್ತಿ ಬಳಕೆಮತ್ತು ಒಳಾಂಗಣ ಕೃಷಿಗೆ ಒಟ್ಟು ನೀಡಿ, ಕೃಷಿಯಲ್ಲಿ ನವೀನ ಮಾದರಿ ಅಳವಡಿಕೆಗೆ ಪ್ರೋತ್ಸಾಹ.
* ಇಸ್ರೇಲ್ ಮಾದರಿಯ ಕೃಷಿಗೆ ಪ್ರೋತ್ಸಾಹ.
ಹೀಗೆ ಕೃಷಿಗೆ ಸಂಬಂಧಿಸಿದಂತೆ ಹಲವು ಭರವಸೆಗಳನ್ನು ಜೆಡಿಎಸ್ ಪ್ರಣಾಳಿಕೆ ಹೊಂದಿದೆ.