ಬೆಂಗಳೂರು: ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಲಾಗಿದೆ. ಈಗ ರೈತರ ಸಾಲ ಮನ್ನಾ ಮಾಡಲು ಯಡಿಯೂರಪ್ಪ ಅವರ ಹತ್ತಿರ ನೋಟು ಪ್ರಿಂಟಿಂಗ್ ಮೆಷೀನ್ ಬಂತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿ ವಿರುದ್ಧ ತಮ್ಮ ಟ್ವೀಟ್ ಮೂಲಕ ಟೀಕಾ ಪ್ರಹಾರವನ್ನೇ ನಡೆಸಿರುವ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ಯಡಿಯೂರಪ್ಪನವರನ್ನು ಕೇಳಿದಾಗ 'ನನ್ನಲ್ಲಿ ನೋಟು ಪ್ರಿಂಟ್ ಮಾಡುವ ಮೆಷಿನ್ ಇದೆಯೇನ್ರಿ' ಎಂದು ಸಿಡಿಮಿಡಿಯಾಗಿದ್ದರು. ಈಗೇನಾದ್ರು ನೋಟು ಪ್ರಿಂಟಿಂಗ್ ಮೆಷಿನ್ ಬಂತಾ ಯಡಿಯೂರಪ್ಪನವರೇ? ಎಂದು ವ್ಯಂಗ್ಯ ಮಾಡಿದ್ದಾರೆ.
ರೈತರ ಸಾಲ ಮನ್ನಾ ಮಾಡಿ ಎಂದು ಅಧಿಕಾರದಲ್ಲಿದ್ದ ಯಡಿಯೂರಪ್ಪನವರನ್ನು ಕೇಳಿದಾಗ 'ನನ್ನಲ್ಲಿನೋಟು ಪ್ರಿಂಟ್ ಮಾಡುವ ಮೆಷಿನ್ ಇದೆ ಏನ್ರಿ' ಎಂದು ಸಿಡಿಮಿಡಿಯಾಗಿದ್ದರು. ಈಗೇನಾದ್ರು ನೋಟು ಪ್ರಿಂಟಿಂಗ್ ಮೆಷಿನ್ ಬಂತಾ ಯಡಿಯೂರಪ್ಪನವರೇ?#ಸುಳ್ಳುಭರವಸೆಪೊಳ್ಳುಪ್ರಣಾಳಿಕೆ
— Siddaramaiah (@siddaramaiah) May 4, 2018
ಇಂದು ಬೆಳಿಗ್ಗೆ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯು ಕಾಂಗ್ರೆಸ್ ಸರ್ಕಾರದ ಯೋಜನೆಗಳ ನಕಲಾಗಿದೆ. ಎಲ್ಲವನ್ನೂ ಕಾಪಿ ಹೊಡೆದು ಕೇವಲ ಯೋಜನೆಗಳ ಹೆಸರನ್ನು ಬದಲಾಯಿಸಿದ್ದಾರೆ. ಈಗಿರುವ ಇಂದಿರಾ ಕ್ಯಾಂಟೀನ್ ರೀತಿಯೇ ಅನ್ನಪೂರ್ಣ ಕ್ಯಾಂಟೀನ್ ಮಾಡುತ್ತೇವೆ ಎಂದಿದ್ದಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಲ್ಲಿಯ ವರೆಗೆ ಯಾಕೆ ಕ್ಯಾಂಟೀನ್ ತೆರೆದಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ನಕಲು ಗಿರಾಕಿಗಳು, ನಮ್ಮ ಯೋಜನೆಗಳ ಕಾಪಿ ಹೊಡೆದಿದ್ದಾರೆ. ಈಗಿರುವ ಇಂದಿರಾ ಕ್ಯಾಂಟೀನ್ ರೀತಿಯೇ ಅನ್ನಪೂರ್ಣ ಕ್ಯಾಂಟೀನ್ ಮಾಡುತ್ತೇವೆ ಎಂದಿದ್ದಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಲ್ಲಿಯ ವರೆಗೆ ಯಾಕೆ ಕ್ಯಾಂಟೀನ್ ತೆರೆದಿಲ್ಲ? #ಸುಳ್ಳುಭರವಸೆಪೊಳ್ಳುಪ್ರಣಾಳಿಕೆ
— Siddaramaiah (@siddaramaiah) May 4, 2018
ರಾಷ್ಟ್ರೀಕೃತ ಬ್ಯಾಂಕ್ ನಲ್ಲಿನ ಒಂದು ಲಕ್ಷ ರೂ.ವರೆಗೆ ಬೆಳೆ ಸಾಲ ಮನ್ನಾ ಕರ್ನಾಟಕದ್ದು ಮಾತ್ರನಾ? ಇಡೀ ದೇಶದ್ದಾ? ಸುಳ್ಳು ಭರವಸೆಗಳ ಮೂಲಕ ನಮ್ಮ ರೈತರನ್ನು ಯಾಮಾರಿಸಬೇಡಿ. ನಾವು ರೈತರ ಸಾಲ ಮನ್ನಾ ಮಾಡಿದಾಗ ಕೇಂದ್ರ ಸಚಿವರೊಬ್ಬರು ಅದನ್ನು 'ಲಾಲಿಪಾಪ್' ಎಂದು ಗೇಲಿಮಾಡಿದ್ದರು. ರೈತರ ಸಾಲಮನ್ನಾಕ್ಕೆ ಕೇಂದ್ರದಿಂದ ಒಂದು ಪೈಸೆ ಕೊಡೊಲ್ಲ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ನಿಮ್ಮನ್ನು ನಮ್ಮ ರೈತರು ಖಂಡಿತಾ ನಂಬುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈಗಾಗಲೇ ಕೇಂದ್ರದ ನರೆಡ್ನ್ರ ಮೋದಿ ನೇತೃತ್ವದ ಬಡವರ ಖಾತೆಗೆ 15 ಲಕ್ಷ ರೂ. ಹಾಕುವ ಹಳೆ ಭರವಸೆಯನ್ನೇ ಈಡೇರಿಸಿಲ್ಲ. ಇನ್ನು ಒಂದು ಲಕ್ಷ ರೂಪಾಯಿ ಬೆಳೆ ಸಾಲ ಮನ್ನಾದ ಹೊಸ ಭರವಸೆ ಬೇಡ, ಹಳೆ ಭರವಸೆ ಈಡೇರಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಒಪ್ಪಿಸಿ ಪುಣ್ಯ ಕಟ್ಟಿಕೊಳ್ಳಿ. ಜನರ ಕಣ್ಣಿಗೆ ಮಣ್ಣೆರುಚುವ ಆಟ ನಮ್ಮ ಕರ್ನಾಟಕದಲ್ಲಿ ನಡೆಯೊಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಬಿಜೆಪಿ ಪ್ರಣಾಳಿಕೆ ರಿಲೀಸ್; ರೈತರ ಸಾಲ ಮನ್ನಾ, ಮಹಿಳೆಯರಿಗೆ ಸ್ಮಾರ್ಟ್ ಪೋನ್
ಇಂದು ಬೆಳಿಗ್ಗೆ ಬಿಜೆಪಿ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನ 1 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್, ಉಚಿತ ಸ್ಯಾನಿಟರಿ ನ್ಯಾಪ್ಕಿನ್, ನೇಕಾರರ 1 ಲಕ್ಷ ರೂ. ಸಾಲ ಮನ್ನಾ, 1 ಲಕ್ಷ ರೂ.ನಿಂದ 2 ಲಕ್ಷ ರೂ.ವರಗೆ ಭಾಗ್ಯಲಕ್ಷ್ಮೀ ಯೋಜನೆ ಹಣ ಹೆಚ್ಚಳ ಸೇರಿದಂತೆ ಮೊದಲಾದ ಅಂಶಗಳನ್ನು ಸೇರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಬಿಜೆಪಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಯೋಜನೆಗಳ ನಕಲು ಎಂದು ಅಣಕಿಸಿದ್ದಾರೆ.