ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೊಂಡ ನಂತರದ ಪರಿಸ್ಥಿತಿಯನ್ನು ಎರಡು ದಿನಗಳಿಂದ ಬೆಂಗಳೂರಿನಲ್ಲೇ ಇದ್ದು ಅವಲೋಕಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೆ ಎಲ್ಲವೂ ತಮ್ಮ ನಿರೀಕ್ಷೆಯ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬುದು ಅರಿವಾಗಿದೆ. ಹೀಗಾಗಿ ತಮ್ಮ ದೆಹಲಿ ಪ್ರಯಾಣವನ್ನೇ 3 ಗಂಟೆಗಳ ಕಾಲ ಮುಂದೂಡಿದ ಅವರು ಬಿಜೆಪಿ ನಾಯಕರ ದಿಡೀರ್ ಸಭೆ ಕರೆದು ಕಮಲ ನಾಯಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗುರುವಾರ ಬೆಳಿಗ್ಗೆ ಶಾಂತವಾಗಿ ಸಭೆ ನಡೆಸಿದ್ದ ಚುನಾವಣಾ ಚಾಣಕ್ಯ, ರಾತ್ರಿ ವೇಳೆಗೆ ರಾಜ್ಯ ಘಟಕದ ಕಾರ್ಯವೈಖರಿ ಕಂಡು ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಮಿಷನ್ 150 ಗುರಿಯಿಟ್ಟುಕೊಂಡು ಈ ರೀತಿ ಕೆಲಸ ಮಾಡಿದರೆ ಹೇಗೆ ಎಂದು ಗರಂ ಆಗಿದ್ದ ಅಮಿತ್ ಶಾ, ಸಭೆಯಲ್ಲಿ ಯುವ ಮೋರ್ಚ ಕಾರ್ಯವೈಖರಿ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಚಾರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿರುವ ಶಾ, ನಿರೀಕ್ಷೆ ಮಟ್ಟದಲ್ಲಿ ಪ್ರಚಾರ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನು ಸಾಕಷ್ಟು ಕಡೆಗಳಲ್ಲಿ LCD ವಾಹನಗಳು ಕೈ ಕೊಟ್ಟಿದ್ದು, LCD ವಾಹನಗಳ ಮೂಲಕ ಸರಿಯಾಗಿ ಪ್ರಚಾರ ಕಾರ್ಯ ಆಗುತ್ತಿಲ್ಲ. ಈ ಬಗ್ಗೆ ನನ್ನ ಬಳಿ ಸಂಪೂರ್ಣ ಮಾಹಿತಿ ಇದೆ. ಆದರೆ ನೀವು ಮಾತ್ರ ಅವುಗಳ ಬಗ್ಗೆ ಗಮನ ಹರಿಸಿಲ್ಲ ಎಂದು ಕಿಡಿಕಾರಿದ ಶಾ, ಜಾಹಿರಾತು ವಿಭಾಗದ ಉಸ್ತುವಾರಿಗಳ ಬಗ್ಗೆಯೂ ಕೆಂಡಾಮಂಡಲರಾದರು.
ಚುನಾವಣಾ ನಿರ್ವಹಣಾ ಸಮಿತಿ, ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮ ವಿಭಾಗದ ಸದಸ್ಯರ ಜತೆ ಸುದೀರ್ಘ ಸಭೆ ನಡೆಸಿದ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ರಣತಂತ್ರ ರೂಪಿಸಿರುವುದಲ್ಲದೆ, ಪಕ್ಷದ ರಾಜ್ಯ ನಾಯಕರ ಆಂತರಿಕ ಹಗ್ಗ ಜಗ್ಗಾಟದ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.