ನವದೆಹಲಿ: ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಸಂಭವಿಸಿದೆ. ಇಲ್ಲಿ ಶುಕ್ರವಾರ ಒಂದು ಕೋತಿ ಮನೆಯ ಛಾವಣಿಯ ಮೇಲೆ ನವಜಾತ ಶಿಶುವನ್ನು ಎಸೆದು ಓಡಿ ಹೋಗಿದೆ. ಆ ಮನೆಯಲ್ಲಿ ವಾಸಿಸುವ ವ್ಯಕ್ತಿ ಕೋತಿ ಬಿಸಾಡಿ ಹೋದ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.
ಈ ಘಟನೆ ಶುಕ್ರವಾರ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಸಂಭವಿಸಿದೆ. ಇಲ್ಲಿನ ಗಲ್ಲಿ ನಂ. 16 ರಲ್ಲಿ ವಾಸವಿರುವ ವಿದ್ಯಾಪತಿ ಎಂಬುವವರ ಮನೆಯ ಮೇಲ್ಛಾವಣಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಶುಕ್ರವಾರ ಬೆಳಿಗ್ಗೆ ಮಗು ಅಳುವುದನ್ನು ಕೇಳಿದ ವಿದ್ಯಾಪತಿ ಛಾವಣಿಯ ಮೇಲೆ ಹೋಗಿ ನೋಡಿದಾಗ ಶಿಶು ಪತ್ತೆಯಾಗಿದೆ. ವಿದ್ಯಾಪತಿ ತಕ್ಷಣ ಮಗುವನ್ನು ಎತ್ತಿಕೊಂಡು ಸಮೀಪದ ಮಜಿಡಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ತುರ್ತಾಗಿ ಮಗುವಿಗೆ ಚಿಕಿತ್ಸೆ ಪ್ರಾರಂಭಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.
ಮಗುವಿನ ಮರಣದ ನಂತರ ಆಸ್ಪತ್ರೆಯ ಆಡಳಿತ ಮಂಡಳಿಯು ಈ ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ತಿಳಿದು ಆಸ್ಪತ್ರೆಗೆ ಆಗಮಿಸಿದ ಪೊಲೀಸರಿಗೆ ವಿದ್ಯಾಪತಿ ಕೋತಿಯು ತನ್ನ ಮನೆಯ ಮೇಲ್ಛಾವಣಿಯ ಮೇಲೆ ಮಗುವನ್ನು ತಂದು ಎಸೆದಿದ್ದು, ತದನಂತರ ತಾನು ಮಗುವನ್ನು ಆಸ್ಪತ್ರೆಗೆ ತಂದು ದಾಖಲಿಸಿರುವುದಾಗಿ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ಈ ಘಟನೆ ನಡೆದು ಎರಡು ದಿನ ಕಳೆದರೂ ಮಗುವನ್ನು ಗುರುತಿಸಲಾಗಿಲ್ಲ. ಮೃತ ಮಗುವಿನ ಬಗ್ಗೆ ಯಾವುದೇ ಮಾಹಿಸಿ ತಿಳಿದುಬಂದಿಲ್ಲ ಎಂದು ತಿಳಿದುಬಂದಿದೆ.
ನವಜಾತ ಶಿಶುವಿನ ಮರಣದ ನಂತರ, ಸಂಗಮ್ ವಿಹಾರ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಏಮ್ಸ್ ಆಸ್ಪತ್ರೆಯಲ್ಲಿ ಮಗುವಿನ ದೇಹವನ್ನು ಸುರಕ್ಷಿತವಾಗಿ ಇರಿಸಿದ್ದಾರೆ. ತನಿಖೆಯಲ್ಲಿ ಒಳಗೊಂಡಿರುವ ಪೊಲೀಸರು ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿದ್ದಾರೆ. ಆ ಮಗು ಯಾರದು? ಮಗುವನ್ನು ಕೋತಿ ಎಲ್ಲಿಂದ ಕರೆತಂದಿದೆ? ಎಂಬುದರ ಬಗ್ಗೆ ತನಿಖೆ ಪ್ರಾರಂಭಿಸಿರುವ ಪೊಲೀಸರು ದೆಹಲಿಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಂದೇಶವನ್ನು ಕಳುಹಿಸಿದ್ದಾರೆ ಮತ್ತು ಈ ಮಗುವಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಮಗುವಿನ ದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ಕೋತಿಯು ಮಗುವನ್ನು ಮೇಲ್ಛಾವಣಿಯಲ್ಲಿ ಬಿಸಾಡಿರುವುದರಿಂದ ಮಗುವಿನ ಆರೋಗ್ಯ ಹದಗೆಟ್ಟಿದೆ. ಆ ಕಾರಣದಿಂದಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಜನರು ಕೋತಿಗಳಿಂದ ತೊಂದರೆಗೊಳಗಾಗಿದ್ದಾರೆ. ಒಂದು ತಿಂಗಳೊಳಗೆ, ಸುಮಾರು ಒಂದು ಡಜನ್ ಜನರು ಕೋತಿಗಳಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.