ಬಿಎಸ್‌ವೈಗೆ ಕಗ್ಗಂಟಾಗಿ ಪರಿಣಮಿಸಿದ ಸಂಪುಟ ವಿಸ್ತರಣೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ತಿಂಗಳ ಅಂತ್ಯದ ವೇಳೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವರೂ ಆಗಿರುವ ಅಮಿತ್ ಶಾ ಅವರನ್ನು ಭೇಟಿ ಆಗಲಿದ್ದಾರೆ. ಇನ್ನೊಂದೆಡೆ  ಸಚಿವಾಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ.

Last Updated : Dec 18, 2019, 10:09 AM IST
ಬಿಎಸ್‌ವೈಗೆ ಕಗ್ಗಂಟಾಗಿ ಪರಿಣಮಿಸಿದ ಸಂಪುಟ ವಿಸ್ತರಣೆ title=

ಬೆಂಗಳೂರು: ಬಹುನಿರೀಕ್ಷಿತ ಉಪಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಸೇಫ್ ಆಗಿದೆ. ಈ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ರಾಜಕೀಯವಾಗಿ ಶಕ್ತಿಶಾಲಿಯಾಗಿರುವುದರಲ್ಲಿ ಸಂಶಯವಿಲ್ಲ. ಆದಾಗ್ಯೂ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದಿನೇ ದಿನೇ ಒತ್ತಡ ಹೆಚ್ಚಾಗುತ್ತಿದ್ದು, ಸಂಪುಟ ವಿಸ್ತರಣೆ ಹಾದಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಡಿಸೆಂಬರ್ 17ರಿಂದ ಜನವರಿ 14ರವರೆಗೂ ಶೂನ್ಯ ಮಾಸವಿರುವುದರಿಂದ ಈ ಸಮಯದಲ್ಲಿ ಯಾವುದೇ ಕಾರ್ಯಗಳನ್ನು ನಾಯಕರು ಕೈಗೊಳ್ಳುವುದಿಲ್ಲ. ಜನವರಿ 15 ಅಂದರೆ ಸಂಕ್ರಾಂತಿ ಹಬ್ಬವಾದ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಈ ತಿಂಗಳ ಅಂತ್ಯದ ವೇಳೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವರೂ ಆಗಿರುವ ಅಮಿತ್ ಶಾ(Amit Shah) ಅವರನ್ನು ಭೇಟಿ ಆಗಲಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಯಲಿದೆ. ಮೈತ್ರಿ ಸರ್ಕಾರದ ವಿರುದ್ಧ ಸಮರ ಸಾರಿ ಒಟ್ಟೊಟ್ಟಿಗೆ ರಾಜೀನಾಮೆ ಸಲ್ಲಿಸಿ, ವಾರಗಟ್ಟಲೆ ತಮ್ಮ ಕ್ಷೇತ್ರ, ನಾಡನ್ನು ಬಿಟ್ಟು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕರಿಗೆ ಬಿಎಸ್‌ವೈ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡುವುದಂತೂ ಖಚಿತ. ಈ ಹಿಂದೆಯೇ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹಾಯ ಮಾಡಿದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ ಅವರ ಈ ಘೋಷಣೆ ಇದೀಗ ಬಿಜೆಪಿಯಲ್ಲಿರುವ ಹಿರಿಯ ನಾಯಕರಿಗೆ ತಲೆ ಬಿಸಿ ಉಂಟುಮಾಡಿದೆ. ಬಿಜೆಪಿಯಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದು, ಅವರೆಲ್ಲರೂ ಇದೀಗ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. 

ಸಂಪುಟದಲ್ಲಿ ಸದ್ಯ 17 ಸ್ಥಾನಗಳು ಖಾಲಿ ಇದ್ದು, ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಸಂಪುಟಕ್ಕೆ ಸೇರ್ಪಡೆಯಾದರೆ  6 ಸ್ಥಾನಗಳು ಮಾತ್ರ  ಬಾಕಿ ಉಳಿಯಲಿವೆ. ಖಾಲಿ ಉಳಿಯಲಿರುವ ಸ್ಥಾನಗಳನ್ನು  ಮೂಲ ಬಿಜೆಪಿಗರಿಗೆ ನೀಡಲು ಬಿಎಸ್‍ವೈ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ಆರ್.ಆರ್.ನಗರ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ ಉಪಚುನಾವಣೆ ಇನ್ನೂ ಬಾಕಿಯಿದ್ದು, ಇದರಲ್ಲಿ ಎರಡು ಸ್ಥಾನಗಳನ್ನು ಖಾಲಿ ಬಿಡುವ ಸಾಧ್ಯತೆಗಳಿವೆ. ಸಚಿವ ಸ್ಥಾನ ಲಾಬಿಗಾಗಿ ಮೂಲ ಬಿಜೆಪಿಗರು ಪ್ರತಿ ಕ್ಷಣವೂ ಯಡಿಯೂರಪ್ಪ ಅವರನ್ನು ಭೇಟಿಯಾಗಲು ಹಾತೊರೆಯುತ್ತಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಯಡಿಯೂರಪ್ಪ ಅವರಿಗೆ ಕಗ್ಗಂಟಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಸೋತವರಿಗೆ ಮಂತ್ರಿಗಿರಿ?
ಬಿಜೆಪಿ ಸರ್ಕಾರ ಬರಲು ತಮ್ಮ ರಾಜಕೀಯ ಭವಿಷ್ಯವನ್ನೇ ಸವಾಲಾಗಿ ತೆಗೆದುಕೊಂಡು ಪ್ರಮುಖ ಪಾತ್ರ ನಿರ್ವಹಿಸಿದ್ದ ಹಿರಿಯ ನಾಯಕ ಹೆಚ್. ವಿಶ್ವನಾಥ್(H Vishwanath) ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಇದೇ ವೇಳೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೋಟಿ ಒಡೆಯ ಎಂಟಿಬಿ ನಾಗರಾಜ್ ಕೂಡ ಸೋಲುಂಡಿದ್ದಾರೆ. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ (MTB Nagaraj)  ಉಪ ಚುನಾವಣೆಯಲ್ಲಿ ಸೋಲುವ ಮೂಲಕ ಮುಖ ಭಂಗ ಅನುಭವಿಸಿದ್ದಾರೆ. ಆದಾಗ್ಯೂ, ತಮ್ಮ ರಾಜಕೀಯ ಭವಿಷ್ಯ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕೈಯಲ್ಲಿದ್ದು, ಅವರು ನಮ್ಮ ಕೈ ಬಿಡುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಗೆದ್ದವರಿಗೆ ಮಂತ್ರಿ ಪದವಿ, ಸೋತವರಿಗೆ ಯಾವುದೇ ಮಂತ್ರಿಗಿರಿ ಇಲ್ಲ ಎಂಬ ಈಶ್ವರಪ್ಪ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಸಾಕಷ್ಟು ಚಿಂತನೆ ನಡೆಸಿರುವ ಸಿಎಂ ಯಡಿಯೂರಪ್ಪ ಅಳೆದು-ತೂಗಿ ಯಾರಿಗೆ ಮಣೆ ಹಾಕುವರೋ? ಯಡಿಯೂರಪ್ಪ ಅವರ ನಿರ್ಧಾರಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸುವುದೇ? ಅಥವಾ ಬಿಜೆಪಿಯ ಮುಂದಿನ ನಡೆ ಯಾವ ರೀತಿ ಇರಬಹುದು ಎಲ್ಲವನ್ನೂ ಕಾದು ನೋಡಬೇಕಿದೆ.

Trending News