ತೆಲಂಗಾಣದ ಲಲ್ಲಾಗುಡದಲ್ಲಿ ಗುರುವಾರ ಸಂಜೆ ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾಳೆ.
ಮೃತ ಸಂಧ್ಯಾ ರಾಣಿ, ಇಲ್ಲಿನ ಶಾಂತಿನಗರದಲ್ಲಿ ಅಲುಮಿನಿಯಮ್ ಡೋರ್ಸ್ ಉತ್ಪಾದಕ ಸಂಸ್ಥೆಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆಯಿಂದಾಗಿ ಸಂಧ್ಯಾ ರಾಣಿ ಅವರ ದೇಹದ ಶೇ. 70ರಷ್ಟು ಭಾಗ ಸುಟ್ಟುಹೋಗಿತ್ತು. ಆದರೂ ಆಕೆಗೆ ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆರೋಪಿ ಕಾರ್ತಿಕ್ ಸುಮಾರು ಒಂದು ವರ್ಷದಿಂದ ಸಂಧ್ಯಾಗೆ ಪರಿಚಯವಿದ್ದು, ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಆತನ ಪ್ರೀತಿಯನ್ನು ನಿರಾಕರಿಸಿದ್ದ ಸಂಧ್ಯಾ `ಇದು ನಮ್ಮ ಕುಟುಂಬಕ್ಕೆ ವಿರುದ್ಧ. ನಾವಿಬ್ಬರೂ ಸ್ನೇಹಿತರಾಗಿ ಇರೋಣ ಎಂದಿದ್ದಳು' ಎಂದು ಲಲ್ಲಾಗುಡ ಪೊಲೀಸರು ಹೇಳಿದ್ದಾರೆ.
ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾರ್ತಿಕ್ ಸಂಧ್ಯಾಳನ್ನು ಕೊಲ್ಲಲು ನಿರ್ಧರಿಸಿದ್ದ. ಗುರುವಾರ ಸಂಜೆ ಸಂಧ್ಯಾ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಕಾರ್ತಿಕ್, ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್ ಅನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಆಗ ನೋಡನೋಡ್ತಿದ್ದಂತೆ ಯುವತಿಯನ್ನು ಬೆಂಕಿ ಆವರಿಸಿದ ಪರಿಣಾಮ, ಸ್ಥಳದಲ್ಲಿದ್ದವರು ಬೆಂಕಿಯನ್ನು ನಂದಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಮಗಳು ಬರುತ್ತಾಳೆಂದು ಮನೆಯಲ್ಲಿ ಕಾಯುತ್ತಿದ್ದ ಸಂಧ್ಯಾ ಅವರ ತಾಯಿ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಅವಳು ನನ್ನ ಕಿರಿಯ ಮಗಳು. ಕಷ್ಟಪಟ್ಟು ಕೆಲಸ ಮಡುತ್ತಿದ್ದಳು, ಕಾರ್ತಿಕ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದು ಸಂಧ್ಯಾ ತಾಯಿ ಹೇಳಿದ್ದಾರೆ.
ಈ ಕುರಿತು ಲಲ್ಲಾಗುಡ ಪೊಲೀಸರು ಕಾರ್ತಿಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಆತನನ್ನು ವಶಕ್ಕೆ ಪಡೆದಿದ್ದಾರೆ.