ನೀತಿ ಸಂಹಿತೆ ಉಲ್ಲಂಘನೆ: ಯೋಗಿ, ಮಾಯಾವತಿಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ 72 ಗಂಟೆಗಳ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಗೆ 48 ಗಂಟೆಗಳ ಚುನಾವಣಾ ಪ್ರಚಾರದಿಂದ ನಿಷೇಧ ಹೇರಲಾಗಿದೆ. 

Last Updated : Apr 15, 2019, 03:40 PM IST
ನೀತಿ ಸಂಹಿತೆ ಉಲ್ಲಂಘನೆ: ಯೋಗಿ, ಮಾಯಾವತಿಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ title=

ನವದೆಹಲಿ: ಪ್ರಚೋದನಾಕಾರಿ ಭಾಷಣ ಮಾಡಿ ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ 72 ಗಂಟೆಗಳ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಗೆ 48 ಗಂಟೆಗಳ ಚುನಾವಣಾ ಪ್ರಚಾರದಿಂದ ನಿಷೇಧ ಹೇರಲಾಗಿದೆ. ಈ ನಿರ್ಬಂಧ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಜಾರಿಯಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಏಪ್ರಿಲ್ 7ರಂದು ಮೇರಠ್​ ಮತ್ತು ದೇವ್​ಬಂದ್​ನಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಮತೀಯ ವಿಚಾರವನ್ನು ಪ್ರಸ್ತಾಪಿಸಿ ಪ್ರಚೋದನಾಕಾರಿ ಭಾಷಣ ಮಾಡಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಮತ್ತು ಮಾಜಿ ಸಿಎಂ ಮಾಯಾವತಿ ಅವರನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ.

ಉತ್ತರ ಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಗಳಲ್ಲಿ ಯೋಗಿ ಆದಿತ್ಯನಾಥ ಭಾರತೀಯ ಸೇನೆಯನ್ನು ಮೋದಿ ಅವರ ಸೇನೆ ಎಂದೂ, ಕಾಂಗ್ರೆಸ್-ಬಿಎಸ್ಪಿ-ಎಸ್ಪಿ ಪಕ್ಷಗಳಿಗೆ ಅಲಿಯಲ್ಲಿ ನಂಬಿಕೆ ಇದ್ದರೆ ನಮಗೆ ಬಜರಂಗಬಲಿಯಲ್ಲಿ ನಂಬಿಕೆ ಇದೆ ಎಂದು ಹೇಳುವ ಮೂಲಕ ಮತೀಯವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಇವರಂತೆ ಮಾಯಾವತಿ ಕೂಡ ಶಹರನ್​ಪುರ್​ ಮತ್ತು ಬರೇಲಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಮತ ವಿಭಜನೆಯಾಗದಂತೆ ಮುಸ್ಲಿಮರು ಎಚ್ಚರಿಕೆ ವಹಿಸಬೇಕು. ಮಹಾಘಟಬಂಧನ್ ಗೆ ಮತ ಹಾಕಬೇಕು. ಇಲ್ಲವಾದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಚುನಾವಣಾ ಆಯೋಗಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.

Trending News