ನವದೆಹಲಿ: ಏಳು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಸೋಮವಾರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಈ ಹಂತದಲ್ಲಿ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ 91 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಏಪ್ರಿಲ್ 11ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 25 ಕಡೆಯ ದಿನವಾಗಿದ್ದು, ಮಾರ್ಚ್ 28 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೊದಲ ಹಂತದಲ್ಲಿ ಆಂಧ್ರಪ್ರದೇಶದ 25 ಮತ್ತು ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಉಳಿದಂತೆ ಅರುಣಾಚಲಪ್ರದೇಶ(2), ಅಸ್ಸಾಂ(5), ಬಿಹಾರ್(4), ಚತ್ತೀಸ್ ಗಢ(1), ಜಮ್ಮು-ಕಾಶ್ಮೀರ(2), ಮಹಾರಾಷ್ಟ್ರ(7), ಮಣಿಪುರ(1), ಮೇಘಾಲಯ(2), ಮಿಜೋರಾಂ(1), ನಾಗಾಲ್ಯಾಂಡ್(1), ಒಡಿಶಾ(4), ಸಿಕ್ಕಿಂ (1), ತ್ರಿಪುರ (1), ಉತ್ತರ ಪ್ರದೇಶ (8), ಉತ್ತರಾಖಂಡ್ (5), ಪಶ್ಚಿಮ ಬಂಗಾಳ (2), ಅಂಡಮಾನ್ ಮತ್ತು ನಿಕೋಬಾರ್ (1) ಮತ್ತು ಲಕ್ಷದ್ವೀಪ (1) ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಎಲ್ಲಾ ಹಂತಗಳ ಮತದಾನದ ಬಳಿಕ ಮೇ 23ರಂದು ಮತಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.