ನವದೆಹಲಿ: ರಾಜಸ್ಥಾನದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದು, ಇದೀಗ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಕೋರಿದ್ದಾರೆ. ಅಂಕಿ-ಅಂಶಗಳಲ್ಲಿ ಏರಿಳಿತವಿದ್ದರೂ ಕೂಡ ಜನಾದೇಶ ಕಾಂಗ್ರೆಸ್ ಪರವಾಗಿದೆ ಎಂದು ಗೆಹ್ಲೋಟ್ ಹೇಳಿದರು. ನಮಗೆ ಬಹುಮತ ಲಭಿಸಲಿದೆ. ಸ್ವತಂತ್ರ ಅಭ್ಯರ್ಥಿಗಳು ಹಾಗೂ ಇತರ ಪಕ್ಷದ ನಾಯಕರು ಕೂಡ ನಮಗೆ ಬೆಂಬಲ ನೀಡಬೇಕು ಎಂದು ಗೆಹ್ಲೋಟ್ ಮನವಿ ಮಾಡಿದ್ದಾರೆ.
"ಕಾಂಗ್ರೆಸ್ ಮುಕ್ತ ಭಾರತವನ್ನು ಕುರಿತು ಮಾತನಾಡುವವರು ಒಂದು ದಿನ ತಾವೇ ಮುಕ್ತಿಹೊಂದುತ್ತಾರೆ" ಎಂದು ಅಶೋಕ್ ಗೆಹ್ಲೋಟ್ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಚುನಾವಣೆಯ ಫಲಿತಾಂಶವನ್ನು 2019 ರ ಚುನಾವಣೆಗಳ ಫಲಿತಾಂಶಕ್ಕೆ ದಿಕ್ಸೂಚಿ ಎಂದು ಅವರು ಪರಿಗಣಿಸಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತಎಣಿಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದ್ದು, 2,274 ಅಭ್ಯರ್ಥಿಗಳ ಭವಿಷ್ಯ ಇನ್ನು ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ. ಈ ವರೆಗೂ ಕಾಂಗ್ರೆಸ್ 94 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಟ್ರೆಂಡಿಂಗ್ ನಿರಂತರವಾಗಿ ಬದಲಾಗುತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಪ್ರಶ್ನಿಸಿದಾಗ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅದನ್ನು ನಿರ್ಧರಿಸಲಿದ್ದಾರೆ ಎಂದು ಪ್ರತಿಕ್ರಿಯ್ಸಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.