ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರವೋ, ಅನರ್ಹತೆಯೋ? ಸುಪ್ರೀಂಕೋರ್ಟ್​ನಲ್ಲಿಂದು ವಿಚಾರಣೆ

ಎಲ್ಲರ ಚಿತ್ತ, ಸುಪ್ರೀಂಕೋರ್ಟ್ ​ನತ್ತ!

Last Updated : Jul 16, 2019, 08:13 AM IST
ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರವೋ, ಅನರ್ಹತೆಯೋ? ಸುಪ್ರೀಂಕೋರ್ಟ್​ನಲ್ಲಿಂದು ವಿಚಾರಣೆ title=

ನವದೆಹಲಿ: ಕರ್ನಾಟಕ ಮೈತ್ರಿ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ರೆಬೆಲ್ ಶಾಸಕರ ರಾಜೀನಾಮೆ ಮತ್ತು ಅನರ್ಹತೆಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. 10 ಅತೃಪ್ತ ಶಾಸಕರು ಸಲ್ಲಿಸಿದ್ದ ಮೇಲ್ಮನವಿಯೊಂದಿಗೆ ಇತರ ಐವರು ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದ್ದು, ಎಲ್ಲರ ಚಿತ್ತ ಇದೀಗ ಸುಪ್ರೀಂಕೋರ್ಟ್ ನತ್ತ ನೆಟ್ಟಿದೆ.

ತಮ್ಮ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಸ್ಪೀಕರ್ ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ 10 ಶಾಸಕರು ಸುಪ್ರೀಂ ಮೊರೆ ಹೋಗಿದ್ದರು.  ಶುಕ್ರವಾರದಂದು ಶಾಸಕರ ರಾಜೀನಾಮೆ ವಿಚಾರವಾಗಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಶಾಸಕರು, ಸ್ಪೀಕರ್ ಹಾಗೂ ಸಿಎಂ ಕುಮಾರಸ್ವಾಮಿ ಪರವಾಗಿ ವಕೀಲರ ವಾದಗಳನ್ನು ಆಲಿಸಿ ತದನಂತರ ವಿಚಾರಣೆಯನ್ನು ಮಂಗಳವಾರದಂದು ನಡೆಸಲಾಗುವುದು. ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತೀರ್ಪು ನೀಡಿತ್ತು. 

ಇದರ ಬೆನ್ನಲ್ಲೇ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಮತ್ತೈದು ಬಂಡಾಯ ಶಾಸಕರಾದ  ಕೆ.ಸುಧಾಕರ್, ರೋಶನ್ ಬೇಗ್, ಎಂಟಿಬಿ ನಾಗರಾಜ್, ಮುನಿರತ್ನ ನಾಯ್ಡು ಮತ್ತು ಆನಂದ್ ಸಿಂಗ್ ತಮ್ಮ ರಾಜೀನಾಮೆಯನ್ನು ಸ್ವೀಕರಿಸದ ಕಾರಣ ವಿಧಾನಸಭೆ ಸ್ಪೀಕರ್ ವಿರುದ್ಧ ಸುಪ್ರೀಂಕೋರ್ಟ್ ಕದ ತಟ್ಟಿದ್ದರು.

ಈಗಾಗಲೇ ಕಾಂಗ್ರೆಸ್-ಜೆಡಿಎಸ್‌ನ 10 ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯೊಂದಿಗೆ ಈ ಅರ್ಜಿಯನ್ನೂ ವಿಚಾರಣೆಗೆ ಪರಿಗಣಿಸಬೇಕು ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ ಸೋಮವಾರ ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠದ ಮುಂದೆ ಮನವಿ ಮಾಡಿದ್ದರು. ರೋಹ್ಟಗಿ ಅವರ ಮನವಿಯನ್ನು ಅಂಗೀಕರಿಸಿದ್ದ ಪೀಠ ಇಂದು 15 ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರ ಅಥವಾ ಅನರ್ಹತೆ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಸುಪ್ರೀಂ ಮೆಟ್ಟಿಲೇರಿರುವ ಅತೃಪ್ತ ಶಾಸಕರು ಮತ್ತು ಮೈತ್ರಿ ಸರ್ಕಾರದ ನಡುವಿನ ಹೋರಾಟದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

Trending News