ಪೊಲೀಸ್ ಇಲಾಖೆ ಮೂಲಸೌಕರ್ಯಕ್ಕೆ ಆದ್ಯತೆ: ಸಿಎಂ ಹೆಚ್.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ಅತ್ಯುತ್ತಮವಾಗಿರುವುದನ್ನು ಗಮನಿಸಿ, ಹರ್ಷ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಮುಂದಿನ ಚುನಾವಣೆ ಸಂದರ್ಭದಲ್ಲಿಯೂ ಶಾಂತಿಗೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು. 

Last Updated : Feb 26, 2019, 08:06 AM IST
ಪೊಲೀಸ್ ಇಲಾಖೆ ಮೂಲಸೌಕರ್ಯಕ್ಕೆ ಆದ್ಯತೆ: ಸಿಎಂ ಹೆಚ್.ಡಿ. ಕುಮಾರಸ್ವಾಮಿ title=

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯು ದೇಶದಲ್ಲೇ ಅತ್ಯುತ್ತಮ ವ್ಯವಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಬದಲಾದ ಸನ್ನಿವೇಶಗಳಲ್ಲಿ ಪೊಲೀಸ್ ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಸೋಮವಾರ ಪೊಲೀಸ್ ಮುಖ್ಯ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಒದಗಿಸಲು ಸಹ ಸರ್ಕಾರ ಸಿದ್ಧವಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಶ್ರಮಿಸಿದ ಅಧಿಕಾರಿಗಳಿಗೆ ಶ್ಲಾಘನೆ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ಅತ್ಯುತ್ತಮವಾಗಿರುವುದನ್ನು ಗಮನಿಸಿ, ಹರ್ಷ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಮುಂದಿನ ಚುನಾವಣೆ ಸಂದರ್ಭದಲ್ಲಿಯೂ ಶಾಂತಿಗೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಕೋಮುಗಲಭೆಯಿಂದ ಕ್ಷೋಭೆಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಅಧಿಕಾರಿಗಳು ಶ್ರಮಿಸಿರುವುದನ್ನು ಶ್ಲಾಘಿಸಿದರು.

ಪೊಲೀಸರು ಸೈನಿಕರಿಗಿಂತ ಕಡಿಮೆಯಿಲ್ಲ:
ಪೊಲೀಸ್ ಇಲಾಖೆ ಜನಸಾಮಾನ್ಯರಿಗೆ ರಕ್ಷಣೆ ಕೊಡುವ ಇಲಾಖೆ. ಪೊಲೀಸರು ಸೈನಿಕರಿಗಿಂತ ಕಡಿಮೆ ಅಲ್ಲ. ಕೊಡಗು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಅವರಿಗೆ ಅಭಿನಂದನೆ ಸಲ್ಲಿಸಿದರು.

ಪೊಲೀಸ್ ಇಲಾಖೆಯಲ್ಲಿ ಸೈಬರ್ ಅಪರಾಧ ವಿಭಾಗವನ್ನು ಸದೃಢಗೊಳಿಸುವ ಅಗತ್ಯವನ್ನು ಸರ್ಕಾರ ಮನಗಂಡಿದೆ. ಈ ನಿಟ್ಟಿನಲ್ಲಿ ಸೈಬರ್ ಅಪರಾಧ ವಿಭಾಗವನ್ನು ಸಬಲಗೊಳಿಸಲು ಕ್ರಮವಹಿಸಲಾಗುವುದು ಎಂದು ಸಿಎಂ ತಿಳಿಸಿದರು. ಪೊಲೀಸ್ ಠಾಣೆಗಳಲ್ಲಿ ಜನಸ್ನೇಹಿ ವಾತಾವರಣ ನಿರ್ಮಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿಯ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು. ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ಹಿರಿಯ ಅಧಿಕಾರಿಗಳು, ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಅಂತೆಯೇ ಔರಾದಕರ್ ವರದಿ ಜಾರಿಯ ಕುರಿತು ಸಹ ಚರ್ಚಿಸಲು ಶೀಘ್ರವೇ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಂಚಾರ ವ್ಯವಸ್ಥೆ ನಿರ್ವಹಣೆಯಲ್ಲಿ ಇನ್ನಷ್ಟು ಸುಧಾರಣೆ ಅಗತ್ಯ ಮತ್ತು ಅಪರಾಧ ಸಾಬೀತಾಗಿ ಶಿಕ್ಷೆ ದೊರೆಯುವ ಪ್ರಮಾಣ ಹೆಚ್ಚಳವಾಗುವುದೂ ಅತಿ ಅಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು. ಸಭೆಯಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು ಮೊದಲಾದವರು ಉಪಸ್ಥಿತರಿದ್ದರು.

Trending News