ಮೈಸೂರು: ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರಿಗೆ ಭಾರತೀಯ ಜನತಾ ಪಕ್ಷ ಟಿಕೆಟ್ ನೀಡಬಾರದು ಎಂದು ಅದೇ ಪಕ್ಷದ ನಾಯಕರಾದ ಮಾಜಿ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಆಗ್ರಹಿಸಿದ್ದಾರೆ.
ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಅವಕಾಶವಿದೆ. ಆದರೆ, ಎಸ್.ಎ. ರಾಮದಾಸ್ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ. ಕಳಂಕಿತ ಚಾರಿತ್ರ್ಯ ಹೊಂದಿರುವ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಹಾಗಾಗಿ ಅವರಿಗೆ ಟಿಕೆಟ್ ನೀಡಬೇಡಿ ಎಂದು ಗೋ. ಮಧುಸೂದನ್ ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ.
ಗೋ. ಮಧುಸೂದನ್ ಅವರ ಈ ಆಗ್ರಹದಿಂದ ಕಳೆದ ಎರಡೂವರೆ ದಶಕದಿಂದಲೂ ಬಿಜೆಪಿ ಪಕ್ಷದಲ್ಲೇ ಇರುವ ಹಾಗೂ ಕೃಷ್ಣರಾಜ ಕ್ಷೇತ್ರದ ಪ್ರಬಲ ಅಭ್ಯರ್ಥಿಯೂ ಆಗಿರುವ ರಾಮದಾಸ್ ರಾಜಕೀಯ ಭವಿಷ್ಯ ಕುಂಠಿತವಾಗಲಿದೆಯೇ ಅಥವಾ ಬಿಜೆಪಿ ವರಿಷ್ಠರು ರಾಮದಾಸ್ ಗೆ ಬೆಂಬಲ ನೀಡುವರೇ ಎಂಬುದನ್ನು ಕಾದುನೋಡಬೇಕಿದೆ.