ಜುಲೈನಲ್ಲಿ 10 ಕೆ.ಜಿ ಅಕ್ಕಿ ನೀಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ : ಮಾಜಿ ಸಿಎಂ ಬೊಮ್ಮಾಯಿ‌

ರಾಜ್ಯ ಸರ್ಕಾರ ಗ್ಯಾರೆಂಟಿ ಹೆಸರಲ್ಲಿ ದೊಖಾ ಸಿರೀಸ್ ಮುಂದುವರೆಸಿದ್ದು, ನೀಡಿದ ಭರವಸೆಯಂತೆ ಜುಲೈನಲ್ಲಿ ಜನರಿಗೆ 10 ಕೆ.ಜಿ ಅಕ್ಕಿ ನೀಡದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು‌.

Written by - Prashobh Devanahalli | Edited by - Krishna N K | Last Updated : Jun 15, 2023, 02:54 PM IST
  • ಜುಲೈನಲ್ಲಿ ಜನರಿಗೆ 10 ಕೆ.ಜಿ ಅಕ್ಕಿ ನೀಡದಿದ್ದರೆ ನಾವು ಹೋರಾಟ ಮಾಡುತ್ತೇವೆ.
  • ರಾಜ್ಯ ಸರ್ಕಾರ ಗ್ಯಾರೆಂಟಿ ಹೆಸರಲ್ಲಿ ದೊಖಾ ಸಿರೀಸ್ ಮುಂದುವರೆಸಿದೆ.
  • ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು‌.
ಜುಲೈನಲ್ಲಿ 10 ಕೆ.ಜಿ ಅಕ್ಕಿ ನೀಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ : ಮಾಜಿ ಸಿಎಂ ಬೊಮ್ಮಾಯಿ‌ title=

ಬೆಂಗಳೂರು : ರಾಜ್ಯ ಸರ್ಕಾರ ಗ್ಯಾರೆಂಟಿ ಹೆಸರಲ್ಲಿ ದೊಖಾ ಸಿರೀಸ್ ಮುಂದುವರೆಸಿದ್ದು, ನೀಡಿದ ಭರವಸೆಯಂತೆ ಜುಲೈನಲ್ಲಿ ಜನರಿಗೆ 10 ಕೆ.ಜಿ ಅಕ್ಕಿ ನೀಡದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು‌.

ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನೀಡಿರುವ ಹೇಳಿಕೆಯಿಂದ ರಾಜ್ಯದ ಜನರಿಗೆ ಮೋಸವಾಗಿದೆ. ಬಡವರು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅವರು ನೀಡಿದ ಮಾತು ತಪ್ಪಿದ್ದಾರೆ. ಅಕ್ಕಿ ಸರಬರಾಜು ಮಾಡುವ ವಿಚಾರದಲ್ಲಿ ಕೇಂದ್ರ ರಾಜಕಾರಣ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆಯಡಿ ಎಲ್ಲ ರಾಜ್ಯಗಳಿಗೂ 5 ಕೆ.ಜಿ ಅಕ್ಕಿ ಕೊಡುತ್ತ ಬಂದಿದೆ ಎಂದರು.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಾಳೆಯಿಂದ ಅವಕಾಶ: ಕೊನೆ ದಿನ ಯಾವಾಗ?

ಅಕ್ಕಿ ಜೊತೆಗೆ ಸಾರಿಗೆ ವೆಚ್ಚವನ್ನು ಕೂಡ ಕೇಂದ್ರ ಸರ್ಕಾರ ಕೊಡುತ್ತಿದೆ. ಅದು ಸುಮಾರು ಮೂರು ರೂಪಾಯಿ ಬರುತ್ತದೆ. ಅದನ್ನು ಕೂಡ ಕೇಂದ್ರ ಸರ್ಕಾರ ನಿಭಾಯಿಸುತ್ತಿದೆ. ಸಿದ್ದರಾಮಯ್ಯ 10 ಕೆ.ಜಿ ಅಕ್ಕಿ ಕೊಡುತ್ತೆನೆ ಎಂದು ಹೇಳುತ್ತಾರೆ. ಅದರಲ್ಲಿ 5 ಕೆ.ಜಿ ಅಕ್ಕಿ ಕೇಂದ್ರ ಸರ್ಕಾರ ನೀಡಿದೆ. ಡಿಸೆಂಬರ್ ನಲ್ಲಿಯೇ ಒಂದು ಕೆ.ಜಿ ಅಕ್ಕಿ ಕಡಿಮೆಯಾದಾಗ, ನಾವು ಹಣ ಕೊಟ್ಟು ಅಕ್ಕಿ ಖರೀದಿಸಿ ಕೊಟ್ಟಿದ್ದೇವೆ. ಅದು ಮಾರ್ಚ್ ವರೆಗೆ ಮಾತ್ರ ಅವಕಾಶ ಇದೆ. ಮುಂದೆ ಆಹಾರ ಭಂಡಾರ ಅಥವಾ ಬೇರೆ ಎಜೆನ್ಸಿ ಮೂಲಕ ಖರೀದಿ ಮಾಡಬೇಕೆಂದು ನಾನು ಕಡತದಲ್ಲಿ ಬರೆದಿದ್ದೇನೆ ಎಂದರು.

ನೀವು ಈಗ ಜನರಿಗೆ ಅಕ್ಕಿ ನೀಡುವ ಸಂದರ್ಭದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿ, ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರ ನಡೆಸಿದ್ದೀರಿ. ಅನ್ನಭಾಗ್ಯ ಸಿಎಂ ಅವರ ಅತ್ಯಂತ ಮಹತ್ವದ ಯೋಜನೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ವತಃ ಯಾಕೆ ಪತ್ರ ಬರೆಯಲಿಲ್ಲ. ನೀವು ಸ್ವತಃ ಕೇಂದ್ರದ ಸಚಿವರ ಜೊತೆ ಮಾತನಾಡಬಹುದಿತ್ತು. ಅಥವಾ ಬೇರೆ ಟೆಂಡರ್ ಮೂಲಕ ಖರೀದಿ ಮಾಡುವ ಪರ್ಯಾಯ ಮಾರ್ಗ ಅನುಸರಿಸಬಹುದಿತ್ತು. ಅದನ್ನು ಬಿಟ್ಟು ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಈಗಲಾದರೂ ಬೇರೆ ಎಜೆನ್ಸಿ ಮೂಲಕ ಖರೀದಿ ಮಾಡಿ ಜನರಿಗೆ ಅಕ್ಕಿ ನೀಡಬೇಕು. ಇಲ್ಲದಿದ್ದರೆ ‌ಜನರ ಅಕೌಂಟ್ ಗೆ ನೇರ ನಗದು ವರ್ಗಾವಣೆ ಮಾಡಿ, ಇಲ್ಲದಿದ್ದರೆ ನಿಮ್ಮ ದೋಖಾ ಸಿರೀಜ್ ಮುಂದುವರೆದಿದೆ ಅಂತ ಜನರು ಭಾವಿಸುತ್ತಾರೆ ಎಂದರು.

ಇದನ್ನೂ ಓದಿ: KCET Results 2023: ಸಿಇಟಿ ಫಲಿತಾಂಶ ಇಂದು ಪ್ರಕಟ! ಈ ನೇರ ಲಿಂಕ್ ಮೂಲಕ ತಿಳಿಯಿರಿ ನಿಮ್ಮ ರಿಸಲ್ಟ್

ಅಕ್ಕಿ ನೀಡುವ ವಿಚಾರದಲ್ಲಿ ಜುಲೈನಲ್ಲಿ 10 ಕೆ.ಜಿ ನೀಡದಿದ್ದರೆ, ನಾವು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ನಿಮ್ಮ ಯೋಜನೆ ಜಾರಿ ಮಾಡಲು ನೀವು ಗಂಭೀರವಾಗಿದ್ದರೆ, ನೀವು ಕೇಂದ್ರ ಸರ್ಕಾರದ ಜೊತೆ ನೇರವಾಗಿ ಮಾತನಾಡಬೇಕಿತ್ತು. ಅದನ್ನು ಬಿಟ್ಟು ಕೇವಲ ಒಂದು ತಿಂಗಳು ಪ್ರಚಾರ ಮಾಡಿಕೊಳ್ಳುತ್ತ ಕಾಲ ಹರಣ ಮಾಡಿದ್ದೀರಿ. ಕೇಂದ್ರ ಸರ್ಕಾರ ಮುಂದಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತದೆ. ಇದುವರೆಗೂ ಮಳೆ ಬಾರದಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಈ ರೀತಿಯ ತೀರ್ಮಾನ ಮಾಡಿದೆ ಎಂದರು.

ಇನ್ನು ವಿದ್ಯುತ್ ದರ ಹೆಚ್ಚಳ ವಿಚಾರದಲ್ಲಿ ರಾಜ್ಯ ಸರ್ಕಾರವೇ ಮಾಹಿತಿ ನೀಡಿದೆ. ಮೇ 12ಕ್ಕೆ ಕೆಇಆರ್ ಸಿ ನೋಟಿಫಿಕೆಶನ್ ಮಾಡಿದೆ. ಆದರೆ ಜೂನ್ 2 ರಂದು ಈ ಸರ್ಕಾರ ಆದೇಶ ಹೊರಡಿಸಿದೆ‌. ಮೇ 12 ರಂದು ಚುನಾವಣೆ ನೀತಿ ಸಂಹಿತೆ‌ ಇರುವುದರಿಂದ ನಾವು ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ.  ರಾಜ್ಯ ಸರ್ಕಾರ ಹೆಚ್ಚಿಗೆ ಆಗುವುದನ್ನು ತಡೆಬಹುದಿತ್ತು. ಈಗ ಹಿಂದಿನ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಸರ್ಕಾರ ತನ್ನ ಲೋಪ ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದೆ ಎಂದರು.

ಇದನ್ನೂ ಓದಿ: ಬಾಂಬ್‌ ಪತ್ತೆ ದಳದ ʻಬೆಳ್ಳಿʼ ಹೆಸರಿನ ಶ್ವಾನ ನಿಧನ

ಪ್ರತಿ ವರ್ಷ ಕೆಇಆರ್ ಸಿ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತದೆ. ಅದು ಸ್ವಾಯತ್ತ ಸಂಸ್ಥೆ. ಮಾರ್ಚ್ ತಿಂಗಳಲ್ಲಿ ದರ ಪರಿಷ್ಕರಣೆ ಬಂದಾಗ ನಾವು ರಾಜ್ಯ ಸರ್ಕಾರದಿಂದಲೇ ಭರಿಸುವುದಾಗಿ ಹೇಳಿದ್ದೇವು. ಇವರು ನಮ್ಮ ಸರ್ಕಾರದ ಅನೇಕ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇದನ್ನು ಏಕೆ ತಡೆ ಹಿಡಿಯಲು ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ಉಚಿತ ಬಸ್ ಯೋಜನೆಯಿಂದ ಜನರಿಗೆ ವಂಚನೆ : ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಹಣ ನೀಡಲು ಆಗುವುದಿಲ್ಲ ಎಂದು ಹೇಳಿರುವುದು ವಾಸ್ತವ. ಅವರಿಗೆ ಪೆಟ್ರೊಲ್ ಬಾಕಿ ಹಣ ಕೊಟ್ಟಿಲ್ಲ. ರಾಜ್ಯ ಸರ್ಕಾರ ಹಣಕಾಸು ವ್ಯವಸ್ಥೆ ಮಾಡಿಕೊಳ್ಳದೇ ಯೋಜನೆ ಘೋಷಿಸಿ ಜಾರಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಯೋಜನೆ ಮುಂದುವರೆಯುವುದಿಲ್ಲ. ಹಣಕಾಸು ಹೊಂದಾಣಿಕೆ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರದ ಹೊಣೆ ಇದೆ. ಫ್ರೀ ಬಸ್ ಯೋಜನೆ ಜನರಿಗೆ ವಂಚಿಸುವ ಕೆಲಸವಾಗಿದೆ. ಇದು ಬಹಳ ದಿನ ನಡೆಯುವುದಿಲ್ಲ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್, ರೈತರ ಪಂಪ್ ಸೆಟ್ ಗೆ ಉಚಿತ್ ವಿದ್ಯುತ್, ಸೇರಿದಂತೆ ಸುಮಾರು 30 ಸಾವಿರ ಕೋಟಿ ಸಬ್ಸಿಡಿ ಇದೆ. ಈಗ ಇವರು ಘೊಷಣೆ ಮಾಡಿರುವ ಯೋಜನೆಗಳಿಗೆ 59 ಸಾವಿರ ಕೋಟಿ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಸುಮಾರು 90 ಸಾವಿರ ಕೋಟಿ ರೂ. ಖರ್ಚಾಗಲಿದೆ. ನಾನು ಎರಡು ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವವರು ಗಮನಿಸಬೇಕಾದ ಅಂಶಗಳು ಇವು

ನಾನು ಹೊಂದಾಣಿಕೆ ರಾಜಕಾರಣ ಮಾಡಿಲ್ಲ : ನಾನು ಯಾವುದೇ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಶಾಮನೂರು ಶಿವಶಂಕರಪ್ಪ ಅವರು ನಮ್ಮ ಬೀಗರು. ಅವರ ಮನೆಯಲ್ಲಿ ಬೀಗತನ ನಡೆಯುತ್ತಿತ್ತು. ನಾನು ಅಲ್ಲಿ ಊಟಕ್ಕೆ ಹೋದಾಗ ಅವರ ಜೊತೆ ಹತ್ತು ನಿಮಿಷ ಮಾತನಾಡಿದ್ದೇನೆ. ನಾನು ದೇವೆಗೌಡರ ಮನೆಗೂ ಹೊಗಿದ್ದೇನೆ. ಎಸ್. ಎಂ ಕೃಷ್ಣ ಅವರ ಮನೆಗೆ, ದೇಶಪಾಂಡೆ ಅವರ ಮನೆಗೂ ಹೋಗಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದರು. ಇನ್ನು ಇದೇ ವೇಳೆ ಆರೋಪ ಮಾಡಿದವರ ಜೊತೆಗೂ ಬೇರೆ ಬೇರೆ ಪಕ್ಷಗಳ ನಾಯಕರ ಜೊತೆ ಸ್ನೇಹ ಇದೆ. ಯಾರೇ ಆಗಲಿ ಸಾಮಾಜಿಕ ಸಂಬಂಧಗಳಿಗೂ ರಾಜಕಿಯ ಮಾಡುವುದು ಸರಿಯಲ್ಲ ಎಂದರು.

ಪ್ರತಾಪ್ ಸಿಂಹ ಅವರಿಗೆ ಸಂಪೂರ್ಣ ಮಾಹಿತಿ ಕೊರತೆ : ಸಿದ್ದರಾಮಯ್ಯ ವಿರುದ್ಧ ಯಾವುದೇ ಪ್ರಕರಣದಲ್ಲಿ ತನಿಖೆ ಮಾಡಿಲ್ಲ ಎಂಬ ಪ್ರತಾಪ್ ಸಿಂಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ‌ ಅವರು, ಸಿದ್ದರಾಮಯ್ಯ ವಿರುದ್ಧ ಐದು ಕೇಸ್‌ಗಳನ್ನು ಫೈಲ್ ಮಾಡಿ ದೂರು ದಾಖಲಿಸಿದ್ದೆವು. ಈ ಐದೂ ಕೇಸ್‌ಗಳಲ್ಲೂ ಅವರೇ ಆರೋಪಿ. 60 ಕೇಸ್‌ಗಳನ್ನು ಎಸಿಬಿಯಿಂದ  ಲೋಕಾಯುಕ್ತಕ್ಕೆ ವರ್ಗಾಯಿಸಿದ್ದೇವೆ ಎಂದರು.

ವಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ್ಲ ಇಲ್ಲ : ವಿಪಕ್ಷ ನಾಯಕನ ಆಯ್ಕೆ ವಿಳಂಬ ವಿಚಾರ. ಯಾವುದೇ ಗೊಂದಲ ಇಲ್ಲ, ವಿಳಂಬ ಆಗಿಲ್ಲ ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಚರ್ಚೆಗೆ ಬಂದಿಲ್ಲ ಅಷ್ಟೇ. ಜುಲೈ 3 ರಿಂದ ಅಧಿವೇಶನ ಇದೆ, ಅದಕ್ಕೂ ಮೊದಲು ವಿಪಕ್ಷ ನಾಯಕನ ಆಯ್ಕೆ ಮಾಡುತ್ತೇವೆ ಎಂದರು. 

ಇದನ್ನೂ ಓದಿ: ಭಟ್ಟರ ʼಗರಡಿʼಗೆ ಸೊಂಟ ಬಳುಕಿಸುತ್ತಾ ಬಂದ ನಿಶ್ವಿಕಾ ನಾಯ್ಡು..! ʼಹೊಡಿರಲೆ ಹಲಗಿʼ

ಕಾಂಗ್ರೆಸ್ ಉಸ್ತುವಾರಿಗಳಿಂದ ಅಧಿಕಾರಿಗಳ ಸಭೆ; ಇದು ಕಾಂಗ್ರೆಸ್ ನ ಎಟಿಎಂ ಸಂಸ್ಕೃತಿ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಭೆ ನಡೆಸಿರುವುದು ಹೊಸದೇನಲ್ಲ.‌ ಕಾಂಗ್ರೆಸ್ ನಲ್ಲಿ ಈ ರೀತಿಯ ಸಂಸ್ಕೃತಿ ಇದೆ. ಈ‌ ಹಿಂದೆಯೂ ರಾಜ್ಯ ಉಸ್ತುವಾರಿ ವಹಿಸಿದವರು ಸಭೆ ನಡೆಸಿದ್ದಾರೆ‌. ಅವರು ಈಗಾಗಲೇ ರಾಜ್ಯವನ್ನು ಎಟಿಎಂ ಮಾಡಲು ನಿರ್ಧರಿಸಿದ್ದಾರೆ. ಅದು ತಪ್ಪದಂತೆ ನೋಡಿಕೊಳ್ಳಲು ಸಭೆ ಮಾಡಿದ್ದಾರೆ ಎಂದರು. ಪತ್ರಿಕಾಗೋಷ್ಠಿ ಯಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಂಸದರಾದ ಪಿ‌.ಸಿ. ಮೊಹನ್, ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಹಾಜರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News