ಬೆಳಗಾವಿ: ನಿನ್ನೆ ಬೆಳಗಾವಿ ಚಳಿಗಾಲದ ಅಧಿವೇಶನ ಶಾಂತಿಯುತವಾಗಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಸೇರಿಸಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಖುದ್ದು ಹಾಜರಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಅಧಿವೇಶನ ಸುಸೂತ್ರವಾಗಿ ನಡೆಯುವಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯವಾದುದು. ನಿಮ್ಮ ಕರ್ತವ್ಯವವನ್ನು ಉತ್ತಮವಾಗಿ ನಿಭಾಯಿಸಿದ್ದೀರಿ, ತಳ ಮಟ್ಟದ ಪೊಲೀಸರ ಕಷ್ಟ ನನಗೆ ಗೊತ್ತಿದೆ.
ಅಧಿಕಾರಿಗಳಿಗಿಂತ ಹೆಚ್ಚಾಗಿ ಪೇದೆ, ಮುಖ್ಯ ಪೇದೆಗಳ ಕೆಲಸ ಜಾಸ್ತಿ ಇರುತ್ತದೆ, ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ನಿಮ್ಮ ಸಮಸ್ಯೆ ಬಬಗೆಹರಿಸುತ್ತೇನೆ. ಅಲ್ಲದೆ ಪೇದೆ- ಮುಖ್ಯಪೇದೆಗಳ ಜೊತೆಗೂ ಸಭೆ ನಡೆಸುತ್ತೇನೆ ಎಂದರು.
ಮುಂದಿನ ಫೆಬ್ರವರಿಯಲ್ಲಿ ಮಂಡಿಸಲಾಗುವ ಬಜೆಟ್ ನಲ್ಲಿ ನೀವು ನಿರೀಕ್ಷಿಸುತ್ತಿರುವ ಔರಾದ್ಕರ್ ವರದಿಯನ್ನು ಖಡಾಖಂಡಿತವಾಗಿ ಜಾರಿಗೊಳಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆ ವರದಿಗಿಂತಲೂ ಹೆಚ್ಚಿನ ಪ್ರಮಾಣದ ಸೌಲಭ್ಯಗಳನ್ನು ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.