Karnataka Assembly Election: ಖರ್ಗೆಗೆ ಪ್ರತಿಷ್ಠೆಯ ಕಣವಾದ ಕಲಬುರಗಿ

Karnataka Assembly Election: ಶರಣ, ಸೂಫಿ ಸಂತರ ಸಾಮಾಜಿಕ ಚಳವಳಿ ನೆಲೆವೀಡು..! ಕೋಮುಸೌಹಾರ್ದಕ್ಕೆ ಮಾದರಿ, ಬರಡು ನೆಲ-ಒರಟು ಭಾಷೆ. ಈ ಸಲ ಕಲಬುರಗಿಯ 9 ಕ್ಷೇತ್ರಗಳಲ್ಲಿ ಯಾರಿಗೆ ಅಧಿಕಾರ? ಕಲಬುರಗಿ ಮತದಾರ ಪ್ರಭುವಿನ ಮನಸಿನಲ್ಲಿ ಇರೋದೇನು..?  

Written by - Yashaswini V | Last Updated : Apr 28, 2023, 06:13 PM IST
  • ಕಲಬುರಗಿ ಜಿಲ್ಲೆಯನ್ನು ನಾವು ಮಿನಿ ಭಾರತ ಎಂದೆಲ್ಲ ಕರೆಯುತ್ತೇವೆ.
  • ನಗರದ ಪ್ರಮುಖ ಯಾತ್ರಾ ಸ್ಥಳಗಳಾದ ಶರಣಬಸವೇಶ್ವರರ ದೇವಸ್ಥಾನ ಹಾಗೂ ಖ್ವಾಜಾ ಬಂದಾ ನವಾಜ್ ಧರ್ಗಾ ಇವುಗಳೊಂದಿಗೆ ಹೊಸದಾಗಿ ಸೇರ್ಪಡೆಯಾಗಿರುವ ಬುದ್ಧ ವಿಹಾರ ಇವುಗಳಿಂದ ಈ ಪ್ರದೇಶ ಭಾವೈಕ್ಯತೆಯ ಕೇಂದ್ರವಾಗಿದೆ.
  • ಇದು ವೈವಿದ್ಯ, ವೈರುಧ್ಯಗಳ ತವರು. ಕೋಮುಸೌಹಾರ್ದಕ್ಕೆ ಮಾದರಿ.
Karnataka Assembly Election: ಖರ್ಗೆಗೆ ಪ್ರತಿಷ್ಠೆಯ ಕಣವಾದ ಕಲಬುರಗಿ  title=

Karnataka Assembly Elections 2023: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳಷ್ಟೇ ಬಾಕಿ ಇದೆ. ಎಲ್ಲೆಡೆ ದಿನೇ ದಿನೇ ಎಲೆಕ್ಷನ್ ಕಾವು ಹೆಚ್ಚಾಗುತ್ತಿದೆ. ಈ ಲೇಖನದಲ್ಲಿ ತೊಗರಿ ಕಣಜ ಎಂದೇ ಖ್ಯಾತಿ ಪಡೆದಿರುವ ಕಲಬುರಗಿಯ ಒಟ್ಟು ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸಲಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ. 

ವಾರಂಗಲ್, ಕಾಕತೀಯ, ಚಾಲುಕ್ಯರ ಆಳ್ವಿಕೆಯ ನೆಲ... ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರವಾದ ಕಲಬುರುಗಿ, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಬಾರಿಯೂ ಕೂಡ ಪ್ರತಿಷ್ಠೆಯ ಕಣವಾಗಿದೆ. ಪ್ರಮುಖವಾಗಿ  ದಲಿತ, ಕೋಲಿ, ಲಿಂಗಾಯತ ಮತಗಳೇ ನಿರ್ಣಾಯಕವಾಗಿರುವ ಈ ಇಡೀ ಜಿಲ್ಲೆಯ 9 ಕ್ಷೇತ್ರಗಳ ಫುಲ್ ಡೀಟೈಲ್‌ ನಿಮಗಾಗಿ... 

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಒಂಬತ್ತು ವಿಧಾನಸಭಾ ಕ್ಷೇತ್ರಗಳಿವೆ. ಈ 9 ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 04 ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಂಡರೆ ಇನ್ನುಳಿದ 05 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿತ್ತು.  ಕಲಬುರಗಿ ಜಿಲ್ಲೆಯ ವಿಧಾನಸಭಾ ಚುನಾವಣೆಯ ಕ್ಷೇತ್ರವಾರು ವಿವರ ಈ ಕೆಳಕಂಡಂತಿದೆ. 

* ಕಲಬುರಗಿ ಜಿಲ್ಲೆಯ ವಿಧಾನಸಭಾ ಚುನಾವಣೆಯ ಕ್ಷೇತ್ರವಾರು ವಿವರ..
ಕಲಬುರಗಿ ಜಿಲ್ಲೆಯನ್ನು ನಾವು ಮಿನಿ ಭಾರತ ಎಂದೆಲ್ಲ ಕರೆಯುತ್ತೇವೆ. ನಗರದ ಪ್ರಮುಖ ಯಾತ್ರಾ ಸ್ಥಳಗಳಾದ ಶರಣಬಸವೇಶ್ವರರ ದೇವಸ್ಥಾನ ಹಾಗೂ ಖ್ವಾಜಾ ಬಂದಾ ನವಾಜ್ ಧರ್ಗಾ ಇವುಗಳೊಂದಿಗೆ ಹೊಸದಾಗಿ ಸೇರ್ಪಡೆಯಾಗಿರುವ ಬುದ್ಧ ವಿಹಾರ ಇವುಗಳಿಂದ ಈ ಪ್ರದೇಶ ಭಾವೈಕ್ಯತೆಯ ಕೇಂದ್ರವಾಗಿದೆ. ಇದು ವೈವಿದ್ಯ, ವೈರುಧ್ಯಗಳ ತವರು. ಕೋಮುಸೌಹಾರ್ದಕ್ಕೆ ಮಾದರಿ. ಬರಡು ನೆಲ-ಒರಟು ಭಾಷೆ, ಆದರೆ ಜನರ ಹೃದಯ ಮಾತ್ರ ಸುಮದಷ್ಟೇ ಕೋಮಲ. ಕಲಬುರಗಿ ಕಲ್ಯಾಣ ಕರ್ನಾಟದ ಶಕ್ತಿ ಕೇಂದ್ರ, ಹಲವು ಹೋರಾಟಗಳ ನೆಲ, ಸಾಮಾಜಿಕ ಚಳವಳಿಗಳ ಕರ್ಮಭೂಮಿ. ಇಲ್ಲಿ ಧ್ವಂಸಗೊಂಡ ಕೋಟೆ ಕೊತ್ತಲುಗಳು, ಇಲಿನ ಕಾರಳ ಇತಿಹಾಸದ ಕುರುಹುಗಳಾಗಿವೆ. ನೀರಿಗಿಂತ ಹೆಚ್ಚು ರಕ್ತ ಹರಿದದ್ದನ್ನು ಇಲ್ಲಿನ ಜನ ಕಂಡಿದ್ದಾರೆ. ಇಲ್ಲಿನ ಭವ್ಯ ಸಂಸ್ಕೃತಿ- ಪರಂಪರೆ ಕಪ್ಪು ಮಣ್ಣಿನಡೆಯಲ್ಲಿ ಹೂತುಹೋಗಿದೆ. ಜಿಲ್ಲೆಯ ಒಂದು ಭಾಗದಲ್ಲಿ ಮರಾಠಿ, ಇನ್ನೊಂದೆಡೆ ತೆಲಗು ಪ್ರಭಾವ ಹಾಗೂ ಇಡಿ ಜಿಲ್ಲೆಯಲ್ಲಿನ ಉರ್ದು-ಹಿಂದಿ ಭಾಷೆಗಳ ಪ್ರಭಾವವಂತು ಕನ್ನಡ ಭಾಷೆಯ ಪ್ರಭಾವಳಿಯನ್ನು ಮಬ್ಬುಗೊಳಿಸುವಷ್ಟು ದಟ್ಟವಾಗಿದೆ.

ಕಲ್ಲುಭೂಮಿ ಕಲಬುರಗಿಯಲ್ಲಿ ಬೆವರು ಸುರಿಸಿ, ಚಿನ್ನದ ಬೆಳೆ ತೆಗೆಯುವ ಸಾಹಸ ಮಾಡಿದ ರೈತಾಪಿ ವರ್ಗ ಈಗ ಸಮಸ್ಯೆಯ ಸುಳಿಯಲ್ಲಿದೆ. ಕೃಷ್ಣ-ಭೀಮೆಯಂತಹ ನದಿಗಳು ಇದ್ದರೂ ಬರಗಾಲ ಬೆನ್ನುಬಿಡದೆ ಕಾಡುತ್ತಿದೆ. ಬೇಸಿಗೆಯಲ್ಲಿ ಜನರು ಗುಳೆಹೋಗುವುದು ಇನ್ನೂ ಸಹ ತಪ್ಪಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಹಣದ ಹೊಳೆ ಹರಿದರು, ಇನ್ನೂ ಹಲವು ಪ್ರದೇಶಗಳ ರೈತರ ಹೊಲಗಳು ನೀರು ಕಂಡಿಲ್ಲ. ನಿಜಾಮನ ಕಾಲದ ಕೆರೆ ಕಟ್ಟೆಗಳು ಇಂದು ಹೂಳು ತುಂಬಿಕೊಂಡು ಹೊಲಗಳಾಗಿವೆ. ಇನ್ನೂ ಬೆಣ್ಣೆತೋರಾ, ಮುಲ್ಲಾಮಾರಿ, ಅಮರ್ಜಾ ಭೀಮಾ ಏತ ನೀರಾವರಿ ಯೋಜನೆಗಳು ಪ್ರಾರಂಭವಾಗಿ 45 ವರ್ಷಗಳು ಕಳೆಯುತ್ತಿವೆ. ಆದರೆ ರೈತರ ಹೊಲಕ್ಕೆ ಹನಿ ನೀರು ಹರಿಸಲಾಗಿಲ್ಲ. ಕಲಬುರಗಿ ಮೂಲದ ಉಧ್ಯಮಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ ತವರಿನಲ್ಲಿ ಕೈಗಾರಿಕೆ ಆರಂಭಿಸುವ ಸಾಹಸಕ್ಕೆ ಕೈ ಹಾಕಿಲ್ಲ. ಈ ಕಾರಣಕ್ಕೆ ಉರಿ ಬಿಸಿಲಿನ ಜಿಲ್ಲೆಯಲ್ಲಿ ಉದ್ಯೋಗ ಮರೀಚಿಕೆಯಾಗಿದೆ.ಈ ಜಿಲ್ಲೆ ಇಬ್ಬರು ಮುಖ್ಯಮಂತ್ರಿಗಳನ್ನು ಈ ನಾಡಿಗೆ ನೀಡಿದೆ. ಒಬ್ಬರು ದಿವಂಗತ ವೀರೇಂದ್ರ ಪಾಟೀಲ್ ಹಾಗೂ ದಿವಂಗತ ಎನ್ ಧರ್ಮಸಿಂಗ್ ಇಬ್ಬರು ಮುಖ್ಯಮಂತ್ರಿಗಳು ಇಲ್ಲಿಂದ ಆಯ್ಕೆಯಾದರೂ ಅಭಿವೃದ್ಧಿ ಎನ್ನುವುದು ಈ ಪ್ರದೇಶಕ್ಕೆ ಮರಿಚಿಕೆಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 9 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ಮೂರು ಮೀಸಲು ಕ್ಷೇತ್ರಗಳಿವೆ.

* ಕಲಬುರಗಿ ದಕ್ಷಿಣ ಕ್ಷೇತ್ರ ಪರಿಚಯ:
ಬಿಜೆಪಿಯ ದತ್ತಾತ್ರೇಯ ಪಾಟಿಲ್ ರೇವೂರ್ ಶಾಸಕ
ಒಟ್ಟು ಮತದಾರರು -272820
ಪುರುಷ -135393   ಮಹಿಳೆ – 137427
ಲಿಂಗಾಯತ -75000
ಬ್ರಾಹ್ಮಣ -35000
ಮುಸ್ಲಿಂ -25000
ಕೋಲಿ-ಕಬ್ಬಲಿಗ- 32000
ಲಂಬಾಣಿ -20000
SC & ST -55000
ಕುರುಬ -25000
ಇತರೆ -5820
 
ಕೈ  ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಗೆಲುವು ಖಚಿತ?
ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ದತ್ತಾತ್ರೇಯ ಪಾಟಿಲ್ ರೇವೂರ್ ಶಾಸಕರಾಗಿದ್ದಾರೆ. ಕಲಬುರಗಿ ದಕ್ಷಿಣ ಮತ ಕ್ಷೇತ್ರ ಪ್ರಾರಂಭದಿಂದಲೂ ಬಿಜೆಪಿಯ ಭದ್ರ ಕೋಟೆ. ಈಗ ಬಿಜೆಪಿ ದತ್ತಾತ್ರೆಯ ಪಾಟೀಲ್ ರೇವೂರ ಅವರು ಈ ಕ್ಷೇತ್ರದ ಶಾಸಕರು. ಕ್ಷೇತ್ರ ವಿಂಗಡನೆ ಯಾದಾಗ ಮೊದಲ ಬಾರಿಗೆ 2008ರಲ್ಲಿ ಈ ಕ್ಷೇತ್ರದಿಂದ ದಿ, ಚಂದ್ರಶೇಖರ ಪಾಟೀಲ್ ರೇವೂರ ಅವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಅವರ ನಿಧನದ ಬಳಿಕ 2010ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ರೇವೂರ ಅವರ ಪತ್ನಿ ಶ್ರೀಮತಿ ಅರುಣಾ ಚಂದ್ರಶೇಖರ ಪಾಟೀಲ್ ರೇವೂರ ಅವರಿಗೆ ಟಿಕೇಟ್ ನೀಡದ ಕಾರಣ ಬಿಜೆಪಿಯಿಂದ ಈ ಕ್ಷೇತ್ರ ಕೈತಪ್ಪಿ, ಜೆಡಿಎಸ್ ಪಾಲಾಯಿತು. ಆಗ ನಡೆದ ಉಪ ಚುನಾವಣೆಯಲ್ಲಿ ಶ್ರೀಮತಿ ಅರುಣಾ ಚಂದ್ರಶೇಖರ ಪಾಟೀಲ್ ಅವರು ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಮೊದಲಿನಿಂದಲೂ ಈ ಕ್ಷೇತ್ರದಲ್ಲಿ ಕಾಂಗ್ರೇಸ್ ವೀಕ್ ಕ್ಯಾಂಡಿಡೆಟ್ ನಿಲ್ಲಿಸಿದ ಪರಿಣಾಮ ರೇವೂರ ಕುಟುಂಬಕ್ಕೆ ಗೆಲುವು ತಾನಾಗಿಯೇ ವಲಿದು ಬಂದಿದೆ. 2013ರಲ್ಲಿ ದಿವಂಗತ ಚಂದ್ರಶೇಖರ ಪಾಟೀಲ್ ರೇವೂರ್ ಅವರ ಪುತ್ರ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಆದರೆ ಕಳೆದ ಬಾರಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರನ್ನು ಕಣಕ್ಕಿಳಿಸಿದ ಪರಿಣಾಮ ಬಾರಿ ಪೈಪೋಟಿಯ ನಡುವೆ ಮತ್ತೆ  ಬಿಜೆಪಿ ದತ್ತಾತ್ರೇಯ ಪಾಟೀಲ್ ರೇವೂರ್ ಅವರು 64,788  ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಅವರು 59357 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. ಇಬ್ಬರ ನಡುವಿನ ಗೆಲುವಿನ ಅಂತರ 5431..

ಈ ಬಾರಿಯೂ ಬಿಜೆಪಿಯಿಂದ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಅಲ್ಲಮಪ್ರಭು ಪಾಟೀಲ್ ನಡುವೆ ಸ್ಪರ್ಧೆ ಇದೆ. ಜೆಡಿಎಸ್ ನಿಂದ ಕೃಷ್ಣ ರೆಡ್ಡಿ, ಆಮ್ ಆದ್ಮಿ ಪಕ್ಷದಿಂದ ಸಿದ್ದು ಪಾಟೀಲ್ ಜೊತೆಗೆ ಪಕ್ಷೇತರವಾಗಿ ಕಣಕ್ಕಿಳಿದಿರುವ ಸಾಮಾಜಿಕ ಕಾರ್ಯಕರ್ತ ಶರಣಬಸಪ್ಪ ಪಪ್ಪಾ ಪ್ರಭಲ ಪೈಪೋಟಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 14 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ. ಆದ ಕಾರಣ ಈ ಬಾರಿ ಅವರನ್ನು ಸೋಲಿಸಲು ಬಹಳಷ್ಟು ಜನ ಅಭ್ಯರ್ಥಿಗಳು ಚಕ್ರವ್ಯೂಹವನ್ನು ಹೆಣೆದಿದ್ದಾರೆ. ಆದರೆ ಇದೆಲ್ಲವನ್ನು ಮೀರಿ ದತ್ತಾತ್ರೇಯ ಪಾಟೀಲ್ ರೇವೂರ್ ಗೆಲುವು ಸಾಧಿಸಿದರೆ ಅದು ಹ್ಯಾಟ್ರಿಕ್ ಆಗಲಿದೆ. ಆಡಳಿತ ವಿರೋಧಿ ಅಲೆ ಕ್ಷೇತ್ರದಲ್ಲಿ ಇರುವ ಕಾರಣ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಗೆಲುವು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿದೆ.

* ಕಲಬುರಗಿ ಉತ್ತರ ಕ್ಷೇತ್ರ ಪರಿಚಯ:- 
-ಕಾಂಗ್ರೆಸ್‌ ಪಕ್ಷದ ಭದ್ರಕೋಟೆ
-ಅತ್ಯಧಿಕ ಮುಸ್ಲಿಂ ಮತದಾರರು
-ಹಾಲಿ ಶಾಸಕಿಗೆ ಬಿ‌ಜೆ‌ಪಿ ಪೈಪೋಟಿ
-ಶಾಸಕಿ ಕನೀಜ್‌ ಫಾತಿಮಾಗೆ ಕೊನೆ ಎಲೆಕ್ಷನ್‌

ಕಲಬುರಗಿ ಉತ್ತರ ಮತಕ್ಷೇತ್ರ ಇದು ಕಾಂಗ್ರೇಸ್ನ ಭದ್ರ ಕೋಟೆ. ಈ ಕ್ಷೇತ್ರ ಅತ್ಯದಿಕ ಮುಸ್ಲಿಂ ಮತದಾರರನ್ನು ಹೊಂದಿರುವ ಕ್ಷೇತ್ರ. ಕ್ಷೇತ್ರ ಪುನರ ವಿಂಗಡನೆಯಾದಾಗಿನಿಂದ 2008 ರಿಂದ ಇಲ್ಲಿಯ ಕಾಂಗ್ರೇಸ್ ಅಭ್ಯರ್ಥಿ ದಿವಂಗತ. ಖಮರುಲ್ ಇಸ್ಲಾಂ ಅವರೆ ಗೆಲುವು ಸಾಧಿಸಿದ್ದಾರೆ. ಆದರೆ ಖಮರುಲ್ ಇಸ್ಲಾಂ ನಿಧನ ಹೊಂದಿದ ಬಳಿಕ 2018ರಲ್ಲಿ ನಡೆದ ಚುನಾವಣೆಯಲ್ಲಿ ಅವರ ಪತ್ನಿ ಶ್ರೀಮತಿ ಕನೀಜ್ ಪಾತೀಮಾ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲ್ಲಿಸಲಾಗಿತ್ತು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಪಾಟೀಲ್ ತೀವ್ರ ಪೈಪೋಟಿಯನ್ನು ನೀಡಿದ್ದರು. ಶ್ರೀಮತಿ ಕನೀಜ್ ಫಾತೀಮಾ ಅವರು 64311 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಅವರ ಪ್ರತಿಸ್ಪರ್ಧಿ ಚಂದ್ರಕಾಂತ ಪಾಟೀಲ್ ಅವರು 58371 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. ಗೆಲುವಿನ ಅಂತರ 5940...
 
ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ -300493
ಪುರುಷರು -149840  
ಮಹಿಳೆಯರು- 150653
ಲಿಂಗಾಯತ -65000
ಮುಸ್ಲಿಂ -150000
ಎಸ್‌ಸಿ & ಎಸ್‌ಟಿ -36000
ಕೋಲಿ-ಕಬ್ಬಲಿಗ -18000
ಲಂಬಾಣಿ -5000
ಬ್ರಾಹ್ಮಣ - 5000
ಇತರೆ - 3493

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶ್ರೀಮತಿ ಕನೀಜ್ ಫಾತೀಮಾ, ಬಿಜೆಪಿಯಿಂದ ಚಂದ್ರಕಾಂತ ಪಾಟೀಲ್, ಜೆಡಿಎಸ್ ನಿಂದ ನಾಸೀರ್ ಹುಸೇನ್ ಸೇರಿದಂತೆ 12ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಒಂದುವರೆ ಲಕ್ಷ ಜನ ಮುಸ್ಲಿಂ ಮತದಾರರಿದ್ದಾರೆ. ಇಲ್ಲಿ ಮುಸ್ಲಿಂ ಮತದಾರರೆ ನಿರ್ಣಾಯಕ ಆದರೆ ದಿವಂತ ಖಮರುಲ್ ಇಸ್ಲಾಂ ಅವರಿದ್ದಾಗ ಈ ಕ್ಷೇತ್ರದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಇದ್ದ ಹಿಡಿತ ಈಗ ಇಲ್ಲವಾಗಿದೆ. ಪ್ರಮುಖವಾಗಿ ಕ್ಷೇತ್ರದ ಜನರು ಖಮರುಲ್ ಇಸ್ಲಾಂ ಅವರ ಪತ್ನಿ ಕನೀಜ್ ಫಾತಿಮಾ ಅವರನ್ನು ಒಪ್ಪಿಕೊಳ್ಳುತ್ತಿಲ್ಲ. ನಮ್ಮ ಕ್ಷೇತ್ರಕ್ಕೆ ಒಬ್ಬ ಪ್ರಬಲ ಪುರುಷ ಅಭ್ಯರ್ಥಿ ಬೇಕು ಎನ್ನುವುದು ಕ್ಷೇತ್ರದ ಜನರ ಅಭಿಪ್ರಾಯ ಆದ ಕಾರಣ ಕಳೆದ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರದ ಮುಸ್ಲಿಂ ಬಡಾವಣೆಗಳಲ್ಲಿ ಕಡಿಮೆ ಮತದಾನವಾಗಿತ್ತು. ಈ ಬಾರಿಯು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯು ಮುಸ್ಲಿಂ ಮತದಾರರ ವಿರೋಧವನ್ನು ಎದುರಿಸಬೇಕಾಗತ್ತದೆ. ಅಲ್ಲದೆ ಜೆಡಿಎಸ್ ನಿಂದ ಕಣಕ್ಕಳಿದಿರುವ ನಾಸೀರ್ ಹುಸೇನ್ ಹಾಗೂ ಕನೀಜ್ ಪಾತಿಮಾ ಮತ್ತು ಇತರೆ ಪಕ್ಷಗಳು ಸೇರಿದಂತೆ 12ಜನ ಅಭ್ಯರ್ಥಿಗಳಲ್ಲಿ 8ಜನ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿರುವ ಕಾರಣ ಮತಗಳು ಒಡೆದು ಬಿಜೆಪಿಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರವು ನಡೆದಿದೆ. ಅಲ್ಲದೆ ಈ ಬಾರಿ ಕನೀಜ್ ಪಾತೀಮಾ ಅವರು ಸೋತರೆ ಮುಂದಿನ ಬಾರಿ ಕಾಂಗ್ರೆಸ್ ಪಕ್ಷದಿಂದ ಒಬ್ಬ ಪ್ರಬಲ ಮುಸ್ಲಿಂ ಪುರುಷ ಅಭ್ಯರ್ಥಿಯನ್ನು ಕಣಕ್ಕಿಳಿಸಹುದು ಎಂಬುದು ಈ ಕ್ಷೇತ್ರದ ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. 

* ಕಲಬುರಗಿ ಗ್ರಾ. ಕ್ಷೇತ್ರದ ಪರಿಚಯ:- 
ಬಸವರಾಜ ಮತ್ತಿಮೂಡ್ ಹಾಲಿ ಬಿ‌ಜೆ‌ಪಿ ಶಾಸಕ
ಒಟ್ಟು ಮತದಾರರು -253855
ಪುರುಷ ಮತದಾರರು -130508  
ಮಹಿಳಾ ಮತದಾರರು -123347

ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ: 
ಲಿಂಗಾಯತ -80000
ಎಸ್‌ಸಿ-ಎಸ್‌ಟಿ  -60000
ಕೋಲಿ-ಕಬ್ಬಲಿಗ-20000
ಕುರುಬ - 20000
ಲಂಬಾಣಿ - 35000
ಮುಸ್ಲಿಂ- 32000
ಬ್ರಾಹ್ಮಣ -5000
ಇತರೆ -1855

ಕಲಬುರಗಿ ಗ್ರಾಮೀಣ ಮತಕ್ಷೇತ್ರ ಪುನರ್ ವಿಂಗಡನೆಯಾದಾಗಿನಿಂದ 2008ರಲ್ಲಿ ಬಿಜೆಪಿಯ ರೇವುನಾಯಕ ಬೆಳಮಗಿ, 2013ರಲ್ಲಿ  ಬಿಜೆಪಿ-ಕೆಜೆಪಿ ಸ್ಪರ್ಧೆಯ ನಡುವೆ ಕಾಂಗ್ರೇಸ್ ಅಭ್ಯರ್ಥಿ ಜಿ.ರಾಮಕೃಷ್ಣ ಅವರು ಗೆಲುವು ಸಾಧಿಸಿದ್ದರು. 2018ರಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ್ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಜಿ ರಾಮಕೃಷ್ಣ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಬಿಜೆಪಿ ಬಸವರಾಜ ಮತ್ತಿಮೂಡ್ ಅವರು 61,750 ಮತಗಳನ್ನು ಪಡೆದು ಗೆದಿದ್ದರು. ಕಾಂಗ್ರೆಸ್ನ ವಿಜಯಕುಮಾರ್ ಜಿ ರಾಮಕೃಷ್ಣ ಅವರು 49,364ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. ಗೆಲುವಿನ ಅಂತರ 12,386..
 
ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬಸವರಾಜ ಮತ್ತಿಮೂಡ್ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರೇವುನಾಯಕ ಬೆಳಮಗಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶಾಸಕ ಬಸವರಾಜ ಮತ್ತಿಮೂಡ್ ಅವರಿಗೆ ಆಡಳಿತ ವಿರೋಧಿ ಅಲೆಯ ಜೊತೆಗೆ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದ ವಿರೋಧವು ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದಲ್ಲೆಲ್ಲಾ ವಿರೋಧ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಈ ಕ್ಷೇತ್ರ ಮೊದಲು ಕಮಲಾಪೂರ ಮೀಸಲು ಕ್ಷೇತ್ರವಿದ್ದಾಗ ಈ ಕ್ಷೇತ್ರದಿಂದ ಮೂರು ಬಾರಿ ಹಾಗೂ 2008ರಲ್ಲಿ ಕ್ಷೇತ್ರ ಪುನರ ವಿಂಗಡನೆಯ ನಂತರ ನಿರಂತರವಾಗಿ ಬಿಜೆಪಿಯಿಂದ ಗೆಲುವು ಸಾಧಿಸಿಕೊಂಡು ಬಂದಿರುವ ರೇವುನಾಯಕ ಬೆಳಮಗಿ ಈ ಬಾರಿ ಪಕ್ಷಾಂತರ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿ ಟಿಕೆಟ್ ಪಡೆದು ಚುನಾವಣಾ ಕಣಕ್ಕಿಳದಿರುವ ಕಾರಣ ಕಾಂಗ್ರೆಸ್ – ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಶಾಸಕ ಬಸವರಾಜ ಮತ್ತಿಮೂಡ್ ಅವರು ಕ್ಷೇತ್ರದಲ್ಲಿನ ಆಡಳಿತ ವಿರೋಧಿ ಅಲೆ ಹಾಗೂ ಲಿಂಗಾಯತ ಸಮುದಾಯದ ವಿರೋಧಿ ಅಲೆಯನ್ನು ಎದುರಿಸಿ ಗೆಲುವು ಸಾಧಿಸಬೇಕಾಗಿದೆ. ಇದೆಲ್ಲದರ ಲಾಭವನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ರೇವುನಾಯಕ ಬೆಳಮಗಿ ಗೆಲುವು ಸಾಧಿಸಿದರೆ ಅಚ್ಚರಿ ಪಡಬೇಕಿಲ್ಲ. ಕ್ಷೇತ್ರದಲ್ಲಿ ಒಟ್ಟು 12ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 

* ಚಿತ್ತಾಪೂರ ವಿಧಾನಸಭಾ ಕ್ಷೇತ್ರದ ಪರಿಚಯ:
- ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು
- ಬಿಜೆಪಿ-ಕಾಂಗ್ರೆಸ್‌ ನಡುವೆ ತುರುಸಿನ ಪೈಪೋಟಿ
- ಪ್ರಿಯಾಂಕ್‌ ಖರ್ಗೆ, ಹಾಲಿ ಕಾಂಗ್ರೆಸ್‌ ಶಾಸಕ
- ಕಾಂಗ್ರೆಸ್‌ ಪಕ್ಷದಿಂದ ಮತ್ತೆ ಪ್ರಿಯಾಂಕ್‌ ಖರ್ಗೆ ಸ್ಪರ್ಧೆ 
- ಬಿಜೆಪಿ ಅಭ್ಯರ್ಥಿಯಾಗಿ ಮಣಿಕಂಠ ರಾಠೋಡ್ ಸ್ಪರ್ಧೆ
- ಜೆಡಿಎಸ್‌ನಿಂದ ಡಾ .ಸುಭಾಶ್ಚಂದ್ರ ರಾಠೋಡ್ ಸೆಣಸಾಟ

ಚಿತ್ತಾಪೂರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2008ರಲ್ಲಿ 9ನೇ ಬಾರಿಗೆ ವಿಧಾನಸಭೆ ಚುನಾವಣೆಯನ್ನು ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರು 2009ರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರಾಷ್ಟ್ರ ರಾಜ್ಯಕಾರಣಕ್ಕೆ ಹೋದ ಕಾರಣ ತೆರವಾದ ಸ್ಥಾನಕ್ಕೆ ನಡೆದ ಉಪ-ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರೀಯಾಂಕ ಖರ್ಗೆ ವಿರುದ್ಧ ಬಿಜೆಪಿಯ ವಾಲ್ಮಿಕಿ ನಾಯಕ ಗೆಲುವು ಸಾಧಿಸಿದ್ದರು. 2013, 2018ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ನ ಪ್ರೀಯಾಂಕ ಖರ್ಗೆ ಅವರು ಗೆಲುವು ಸಾಧಿಸಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಪ್ರೀಯಾಂಕ ಖರ್ಗೆ ಅವರು 69700 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ವಾಲ್ಮೀಕಿ ನಾಯಕ ಅವರು 65,307 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. ಗೆಲುವಿನ ಅಂತರ- 4393..))

ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಮತದಾರರ ಸಂಖ್ಯೆ: 
ಒಟ್ಟು ಮತದಾರರು -242082
ಪುರುಷ -115798  
ಮಹಿಳೆ -115388
ಲಿಂಗಾಯತ -62000
ಬ್ರಾಹ್ಮಣ -6000
ಕೋಲಿ ಕಬ್ಬಲಿಗ -40000
ಮುಸ್ಲಿಂ -20000
ಕುರುಬ -20000
ಎಸ್‌ಸಿ & ಎಸ್‌ಟಿ -45000
ಲಂಬಾಣಿ - 25000
ಇತರೆ- 13186

2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಹಾಗೆ ಈ ಬಾರಿಯ 2023ರ ವಿಧಾನಸಭೆ ಚುಣಾವಣೆಯಲ್ಲಿ ಚಿತ್ತಾಪುರದಲ್ಲಿ ಶಾಸಕ ಪ್ರೀಯಾಂಕ ಖರ್ಗೆ ಅವರನ್ನು ಸೋಲಿಸಲು ರಾಜ್ಯ ಬಿಜೆಪಿಯನಾಯಕರು ಬಾರಿ ತಲೆ ಕೆಡಿಸಿಕೊಂಡಿದ್ದರು. ರಾಜ್ಯ ಬಿಜೆಪಿ ಸರ್ಕಾರದ ಒಂದೊಂದು ಹಗರಣಗಳನ್ನು ಹೊರಗೆಳೆಯುವ ಮೂಲಕ ಶಾಸಕ ಪ್ರೀಯಾಂಕ ಖರ್ಗೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದರು. ಆದ ಕಾರಣ ಈ ಕ್ಷೇತ್ರದಲ್ಲಿ ಈ ಬಾರಿ ಪ್ರೀಯಾಂಕ ಖರ್ಗೆ ಅವರನ್ನು ಸೋಲಿಸಿಯೇ ತೀರುತ್ತೇವೆ ಎಂದು ವಾದ ಮಾಡುತ್ತಿರುವ ಬಿಜೆಪಿ ನಾಯಕರು ಕೊನೆಗೆ 40 ಪ್ರಕರಣಗಳು ದಾಖಲಾಗಿರುವ ಹಾಗೂ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಶಿಕ್ಷೆಗೊಳಪಟ್ಟು ಉಚ್ಚ ನ್ಯಾಯಾಲಯದಿಂದ ತಡೆಯಾಜ್ಷೆ ತಂದಿರುವ ಮಣಿಕಂಠ ರಾಠೋಡ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಆದರೆ ಬಿಜೆಪಿ ನಿರ್ಧಾರದಿಂದ ಬೇಸರಗೊಂಡಿರುವ ಬಿಜೆಪಿಯ ಹಿರಿಯ ನಾಯಕರೆಲ್ಲರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರಿಂದ ಚಿತ್ತಾಪುರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೀಯಾಂಕ ಖರ್ಗೆ ಅವರ ಗೆಲುವಿನ ಹಾದಿ ಸುಗಮವಾಗಿದೆ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಹತ್ತಿರ ಹಣಬಲ, ತೋಳ್ಬಲ ಎಲ್ಲವೂ ಇರುವ ಕಾರಣ ಶಾಸಕ ಪ್ರೀಯಾಂಕ ಖರ್ಗೆ ಅವರಿಗೆ ಪ್ರಬಲ ಪೈಪೋಟಿ ನೀಡಬಲ್ಲರು ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಡಾ . ಸುಭಾಶ್ಚಂದ್ರ ರಾಠೋಡ್ ಸೇರಿದಂತೆ 7ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

* ಚಿಂಚೋಳಿ ವಿಧಾನಸಭಾ ಕ್ಷೇತ್ರದ ಪರಿಚಯ:- 
- ಹಾಲಿ ಶಾಸಕ ಡಾ.ಅವಿನಾಶ್‌ ಜಾಧವ್‌, ಬಿ‌ಜೆ‌ಪಿ ಶಾಸಕ
ಒಟ್ಟು ಮತದಾರರು -199154
ಪುರುಷ -101639 
ಮಹಿಳೆ -97515

ಚಿಂಚೋಳಿ ವಿಧಾನಸಭಾ ಕ್ಷೇತ್ರ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ್ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371ಜೆ ವಿಧಿ ತಿದ್ದುಪಡಿಗೆ ಹೋರಾಟ ನಡೆಸಿದ ಮಾಜಿ ಸಚಿವ ದಿವಂಗತ ವೈಜನಾಥ ಪಾಟೀಲ್ ರನ್ನು ಈ ನಾಡಿಗೆ ಕೊಟ್ಟಿರುವ ಕ್ಷೇತ್ರ. ಈ ಹಿಂದೆ ಸಾಮಾನ್ಯ ಕ್ಷೇತ್ರವಾಗಿದ್ದ ಚಿಂಚೋಳಿ ಕ್ಷೇತ್ರದ ಪುನರ್ ವಿಂಗಡನೆಯ ನಂತರ ಎಸ್ಸಿ ಮೀಸಲು ಕ್ಷೇತ್ರವಾದ ನಂತರ 2008ರಲ್ಲಿ ಮೊದಲ ಬಾರಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸುನೀಲ್ ವಲ್ಯಾಪೂರೆ ಶಾಸಕರಾಗಿ ಆಯ್ಕೆಯಾದರು. 2013 ಹಾಗೂ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಾ. ಉಮೇಶ ಜಾದವ ಅವರು ಬಿಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪೂರೆ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಡಾ, ಉಮೇಶ್ ಜಾದವ್ ಅವರು 73,905 ಮತಗಳನ್ನು ಪಡೆದರೆ ಬಿಜೆಪಿಯ ಸುನೀಲ್ ವಲ್ಯಾಪೂರ್ 54,693 ಮತಗಳನ್ನು ಪಡೆದು ಸೋತಿದ್ದರು. ಗೆಲುವಿನ ಅಂತರ 19,212..

ಚಿಂಚೋಳಿ ಕ್ಷೇತ್ರದಿಂದ ಆಯ್ಕೆಯಾದ ಡಾ. ಉಮೇಶ ಜಾದವ್ ಅವರು 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುವ ಮೂಲಕ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಗೆಲುವು ಸಾಧಿಸಿದರು. ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ-ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ, ಉಮೇಶ ಜಾದವ್ ಅವರ ಪುತ್ರ ಡಾ, ಅವಿನಾಶ ಜಾದವ್ ಕಣಕ್ಕಿಳಿದು ಕಾಂಗ್ರೆಸ್ ಪಕ್ಷದ ಸುಭಾಷ ರಾಠೋಡ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ್ 69,109 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ್ 61,079 ಮತಗಳನ್ನು ಪಡೆದು ಸೋಲನ್ನಪ್ಪಿದ್ದರು. ಮತಗಳ ಅಂತರ 8030..

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಜಾತೀವಾರು ಲೆಕ್ಕಾಚಾರ: 
ಲಿಂಗಾಯತ -45000
ಬ್ರಾಹ್ಮಣ -5000
ಕೋಲಿ-ಕಬ್ಬಲಿಗ - 30000
ಕುರುಬ- 15000
ಮುಸ್ಲಿಂ -20000
ಎಸ್‌ಸಿ & ಎಸ್‌ಟಿ -45000
ಲಂಬಾಣಿ -35000
ಇತರೆ- 4154

ಈ ಬಾರಿಯು ಚಿಂಚೋಳಿ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ. ಅವಿನಾಶ ಜಾಧವ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಸುಭಾಷ ರಾಠೋಡ್ ಹಾಗೂ ಜೆಡಿಎಸ್ ನಿಂದ ಸಂಜೀವನ್ ಯಾಕಾಪೂರ ಸೇರಿದಂತೆ ಒಟ್ಟು 10ಜನ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಬಿಗ್ ಫೈಟ್ ಇದೆ. ರಾಜ್ಯ ಬಿಜೆಪಿ ಸರ್ಕಾರ ಹೊರಡಿಸಿರುವ ಒಳ ಮೀಸಲಾತಿಯ  ಕಿಚ್ಚು ಜೋರಾಗಿದ್ದು, ಕ್ಷೇತ್ರದಲ್ಲಿ ಲಂಬಾಣಿಗರು ಬಿಜೆಪಿಯ ವಿರುದ್ಧ ತಿರುಗಿ ಬಿದಿದ್ದಾರೆ. ಆದರೆ ಈ ಕಿಚ್ಚನ್ನು ಆರಿಸಲು ಬಿಜೆಪಿ ನಾಯಕರು ಹೆಣಗಾಡುತ್ತಿದ್ದಾರೆ. ಅಲ್ಲದೆ ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ತಮ್ಮ ಮಗ ಡಾ. ಅವಿನಾಶ ಜಾಧವ್ ಅವರನ್ನು ಗೆಲ್ಲಿಸಲು ಕ್ಷೇತ್ರದಾದ್ಯಂತ ಸಂಚಾರ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ್ ಈ ಕ್ಷೇತ್ರದಲ್ಲಿ 30 ವರ್ಷಗಳಿಂದ ಸಾಮಾಜಿಕ ಕೆಲಸವನ್ನು ಮಾಡಿಕೊಂಡು ಬರುವ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ನಡೆದ ಮಕ್ಕಳ ಮಾರಾಟ ಪ್ರಕರಣಗಳನ್ನು ಬೆಳಕಿಗೆ ತರುವ ಮೂಲಕ ಲಂಬಾಣಿ ಜನಾಂಗದಲ್ಲಿರುವ ಬಡತನದ ನೋವನ್ನು ಸರ್ಕಾರಕ್ಕೆ ಮುಟ್ಟಿಸುವ ಮೂಲಕ ಜನರ ಶಿಕ್ಷಣ, ವಸತಿ, ಮೂಲಭೂತ ಸೌಲಭ್ಯ ಕಲ್ಪಿಸಲು ರಾಠೋಡ್ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆ ಒಂದು ಅವಕಾಶ ಕಲ್ಪಿಸಿಕೊಡಿ ಎಂದು ಹೇಳುವ ಮೂಲಕ ಕ್ಷೇತ್ರದ ಜನರ ಮುಂದೆ ಹೋಗುತ್ತಿದ್ದಾರೆ. ಈ ಹಿಂದೆ ಡಾ. ಉಮೇಶ್ ಜಾದವ್ ಅವರನ್ನು ಎರಡು ಬಾರಿ ಶಾಸಕರನ್ನಾಗಿ ಹಾಗೂ ಅವರ ಮಗನನ್ನು ಶಾಸಕರನ್ನಾಗಿ ಮಾಡಿರುವ ಕ್ಷೇತ್ರದ ಜನ ಈ ಬಾರಿ ಸುಭಾಷ ರಾಠೋಡ್ ಅವರತ್ತ ಒಲವು ಹೊಂದಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಲಂಬಾಣಿ ಸಮಾಜದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಮೂಲಕ ಹಕ್ಕು ಪತ್ರವನ್ನು ವಿತರಣೆ ಮಾಡಿಸಿದ್ದೇವೆ. ನನಗೆ ಮತ್ತೊಂದು ಬಾರಿ ಅವಕಾಶ ಮಾಡಿಕೊಡಿ ಎಂದು ಅವಿನಾಶ್ ಜಾಧವ್ ಪ್ರಚಾರ ಪ್ರಾರಂಭಿಸಿದ್ದಾರೆ. ಆದರೆ ಮತದಾರ ಪ್ರಭು ಯಾರ ಕೈ ಹಿಡಿಲಿದ್ದಾರೆ ಎನ್ನುವುದು ಮೇ 13 ರಂದು ಹೊರ ಬೀಳಲಿದೆ.

ಅಳಂದ ವಿಧಾನಸಭಾ ಕ್ಷೇತ್ರದ ಪರಿಚಯ:- 
- ಈ ಕ್ಷೇತ್ರ ಕಲಬರುಗಿ ಜಿಲ್ಲೆಯ ಕ್ಷೇತ್ರಗಳಲ್ಲೇ ಭಿನ್ನ
- ಪಕ್ಷಕ್ಕಿಂದ ವ್ಯಕ್ತಿಗಳಿಗೆ ಮತದಾರ ಮಣೆ
- BR ಪಾಟೀಲ್‌ v/s ಸುಭಾಷ್‌ ಗುತ್ತೇದಾರ್‌
- 2018ರಲ್ಲಿ ಕೇವಲ 697 ಮತಗಳಿಂದ ಗೆದ್ದಿದ್ದ ಗುತ್ತೇದಾರ್‌
- ಮತ್ತೆ ಬಿ.ಆರ್.ಪಾಟೀಲ್ v/s ಗುತ್ತೇದಾರ್‌ ಎದುರಾಳಿ
- ಕಾಂಗ್ರೆಸ್‌ ಪಕ್ಷದ ಬಿ.ಆರ್.ಪಾಟೀಲ್ ಗೆಲುವು ಸಂಭವ

ಆಳಂದ ವಿಧಾನ ಸಭೆ ಮತಕ್ಷೇತ್ರ ಎಲ್ಲ ಕ್ಷೇತ್ರಗಳಿಗಿಂತಲೂ ಭಿನ್ನ. ಇಲ್ಲಿ ಹಿಂದಿನಿಂದಲೂ ಯಾವ ಪಕ್ಷದ ಅಭ್ಯರ್ಥಿಯೂ ಗೆಲ್ಲುವುದಿಲ್ಲ. ಇಲ್ಲಿ ಇಬ್ಬರು ಮುಖಂಡರಿದ್ದಾರೆ. ಒಬ್ಬರು ಬಿ.ಆರ್.ಪಾಟೀಲ್. ಇನ್ನೊಬ್ಬರು ಸುಭಾಷ ಗುತ್ತೇದಾರ ಇವರು ಯಾವ ಪಕ್ಷಕ್ಕೆ ಹೋಗುತ್ತಾರೆ, ಅಲ್ಲಿ ಆ ಪಕ್ಷಕ್ಕೆ ಗೆಲುವು. ಇಲ್ಲಿ ಒಂದು ಬಾರಿ ಬಿ.ಆರ್.ಪಾಟೀಲ್ ಗೆದ್ದರೆ ಮತ್ತೊಂದು ಬಾರಿ ಸುಭಾಷ್ ಗುತ್ತೇದಾರ ಗೆಲುವು ಸಾಧಿಸುತ್ತಾರೆ. 2013ರಲ್ಲಿ ಬಿ.ಆರ್.ಪಾಟೀಲ್ ಕೆಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೇಸ್ ಅಭ್ಯರ್ಥಿ ಇಲ್ಲಿ ಕೇವಲ ಐದು ಸಾವಿರ ಮತ ಪಡೆದ ಅತ್ಯಂತ ಕಳಪೆ ಸಾಧನೆ ಮಾಡಿದ್ದರು. 2018ರಲ್ಲಿ ಬಿ.ಆರ್.ಪಾಟೀಲ್ ಕಾಂಗ್ರೇಸ್ ಸೇರುವ ಮೂಲಕ ಕಾಂಗ್ರೇಸ್ ನಿಂದ ಸ್ಪರ್ದಿಸಿದ್ದರು. ಸುಭಾಷ ಗುತ್ತೇದಾರ ಬಿಜೆಪಿ ಸೇರಿ ಬಿಜೆಪಿಯಿಂದ ಸ್ಪರ್ದಿಸಿ, ಅಲ್ಪ ಮತಗಳಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಸುಭಾಷ ಗುತ್ತೇದಾರ 76,815 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಬಿ.ಆರ್.ಪಾಟೀಲ್ 76.118 ಮತಗಳನ್ನು ಪಡೆದು ಸೋತಿದ್ದರು. ಗೆಲುವಿನ ಅಂತರ 697.. 
 
ಅಳಂದ ವಿಧಾನಸಭಾ ಕ್ಷೇತ್ರದ ಜಾತಿವಾರು ಪರಿಚಯ: 
ಒಟ್ಟು ಮತದಾರರು -236164
ಪುರುಷ -123115  ಮಹಿಳೆ - 113049
ಲಿಂಗಾಯತ -75000
ಮುಸ್ಲಿಂ -25000
ಕೋಲಿ ಕಬ್ಬಲಿಗ - 12000
ಕುರುಬ -20000
ಎಸ್‌ಸಿ & ಎಸ್‌ಟಿ -45000
ಮರಾಠ -15000
ಲಂಬಾಣಿ -20000
ಇತರೆ – 19164

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸುಭಾಷ ಗುತ್ತೇದಾರ್, ಕಾಂಗ್ರೆಸ್ ಪಕ್ಷದಿಂದ ಬಿ.ಆರ್.ಪಾಟೀಲ್, ಜೆಡಿಎಸ್ ನಿಂದ ಮಹೇಶ್ವರಿ ವಾಲಿ ಸೇರಿದಂತೆ 13 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಆಳಂದ ಮತಕ್ಷೇತ್ರದಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆಯ ಜೊತೆಗೆ ಕಳೆದ ವರ್ಷ ಲಾಡ್ಲೆಮಷಾಕ್ ದರ್ಗಾದಲ್ಲಿರುವ ಶಿವಲಿಂಗ ವಿಚಾರವಾಗಿ ಹಿಂದೂ ಮುಸ್ಲೀಂ ಗಲಾಟೆಯಾಗಿರುವ ಅಂಶವು ಬಿಜೆಪಿಗೆ ಮೈನಸ್ ಆಗಲಿದೆ. ಕಳೆದ ಬಾರಿ ಕೇವಲ ಆರುನೂರು ಚಿಲ್ಲರೆ ಮತಗಳಿಂದ ಸೋತಿರುವ ಬಿ.ಆರ್.ಪಾಟೀಲ್ ಬಿಜೆಪಿಯ ಈ ಮೈನಸ್ ಪೈಂಟನನ್ನು ಪ್ಲಸ್ ಮಾಡಿಕೊಳ್ಳುವ ಮೂಲಕ ಗೆಲುವಿನ ದಡಸೇರಲು ಸಿದ್ದತೆಯಲ್ಲಿ ತೊಡಗಿದ್ದಾರೆ. ಜೆ.ಪಿ.ಚಳುವಳಿ ಹಾಗೂ ಸಮಾಜವಾದಿ ಹೋರಾಟದಿಂದ ಬಂದಿರುವ ಬಿ.ಆರ್.ಪಾಟೀಲ್ ಮೌಲ್ಯಾದಾರಿತ ರಾಜಕಾರಣವನ್ನು ಮಾಡಿಕೊಂಡು ಬಂದಿರುವ ಪ್ರಭುದ್ಧ ರಾಜಕಾರಣಿಯಾಗಿದ್ದಾರೆ. ಕಳೆದ ಬಾರಿ ಕ್ಷೇತ್ರದಲ್ಲಿ ಬಿ.ಆರ್.ಪಾಟೀಲ್ ಅವರು ಮಾಡಿರುವ ಅಭಿವೃದ್ಧಿ ಹಾಗೂ ಈ ಬಾರಿ ಸುಭಾಷ ಗುತ್ತೇದಾರ್ ಅವರು ಮಾಡಿರುವ ಅಭಿವೃದ್ಧಿಯನ್ನು ತುಲನೆ ಮಾಡಿ ನೋಡುವ ಮೂಲಕ ಕ್ಷೇತ್ರದ ಜನರು ತಮ್ಮ ಮತವನ್ನು ಚಲಾವಣೆ ಮಾಡಲಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಬಿ.ಆರ್.ಪಾಟೀಲ್ ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ. 

* ಅಫಜಲಪೂರ ವಿಧಾನಸಭಾ ಕ್ಷೇತ್ರದ ಪರಿಚಯ:- 
- ಇದು ಗುತ್ತೇದಾರ ಕುಟುಂಬದ ಭದ್ರ ಕೋಟೆ
- ಮಾಲಿಕಯ್ಯ ಗುತ್ತೇದಾರ್‌ 6 ಬಾರಿ ಗೆಲುವು
- ಹಾಲಿ ಕಾಂಗ್ರೆಸ್‌ ಶಾಸಕ ಎಮ್‌ವೈ ಪಾಟೀಲ್‌

ಅಫಜಲಪೂರ ವಿಧಾನಸಭೆ ಕ್ಷೇತ್ರ ಇದು ಗುತ್ತೇದಾರ ಕುಟುಂಬದ ಭದ್ರ ಕೋಟೆ. ಇಲ್ಲಿ ಅವರು ಯಾವ ಪಕ್ಷದಿಂದ ನಿಲ್ತಾರೋ ಅವರದ್ದೆ ಗೆಲುವು. ಈ ಕ್ಷೇತ್ರದಿಂದ ಕಾಂಗ್ರೇಸ್ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಿದ ಮಾಲಿಕಯ್ಯಾ ಗುತ್ತೇದಾರ ಅವರು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಕಳೆದ ಬಾರಿ 2018ರಲ್ಲಿ ಚುನಾವಣೆಯ ಸಂದರ್ಭದಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿರೋಧಿಸಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಚುನಾವಣಾ ಕಣಕ್ಕಿಳಿದಿದ್ದರು. ಆಗ ಬಿಜೆಪಿಯಲ್ಲಿದ್ದ ಎಂ.ವೈ.ಪಾಟೀಲ್ ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರುವ ಮೂಲಕ ಚುನಾವಣಾ ಕಣಕ್ಕಿಳಿದು ಮಾಲೀಕಯ್ಯ ಗುತ್ತೇದಾರ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು. ಎಂ.ವೈ.ಪಾಟೀಲ್ ಅವರು ಮೂರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 1978ರಲ್ಲಿ ಜನತಾ ಪಕ್ಷದಿಂದ 2004ರಲ್ಲಿ ಜೆಡಿಎಸ್ ನಿಂದ 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ  ಎಂ.ವೈ.ಪಾಟೀಲ್ ಗೆಲುವು ಸಾದಿಸಿದ್ದರು. ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಎಂ.ವೈ.ಪಾಟೀಲ್ ಅವರು 71,735 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಮಾಲೀಕಯ್ಯಾ ಗುತ್ತೇದಾರ್ ಅವರು 61,141 ಮಗಳನ್ನು ಪಡೆದಿದ್ದರು. ಮತಗಳ ಅಂತರ..10,594

ಅಫಜಲಪೂರ ಮತ ಕ್ಷೇತ್ರದ ಜಾತಿ ಲೆಕ್ಕಾಚಾರ: 
ಒಟ್ಟು ಮತದಾರರು -223803
ಪುರುಷ -115002  
ಮಹಿಳೆ -108801
ಲಿಂಗಾಯತ -75000
ಬ್ರಾಹ್ಮಣ - 5000
ಕೊಲಿ -40000
ಮುಸ್ಲಿಂ -28000
ಕುರುಬ -30000
ಎಸ್‌ಸಿ & ಎಸ್‌ಟಿ - 40000
ಲಂಬಾಣಿ -15000
ಇತರೆ -5803

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ.ವೈ.ಪಾಟೀಲ್, ಬಿಜೆಪಿಯಿಂದ ಮಾಲೀಕಯ್ಯಾ ಗುತ್ತೇದಾರ್ ಹಾಗೂ ಜೆಡಿಎಸ್ ನೀಂದ ಶಿವಕುಮಾರ ನಾಟೀಕಾರ್ ಹಾಗೂ ಸಮಾಜವಾದಿ ಪಕ್ಷದಿಂದ ಪಿಎಸ್ ಐ ಅಕ್ರಮ ಪ್ರಕರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಸೇರಿದಂತೆ ಒಟ್ಟು ಹತ್ತು ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಬಾರಿಯ ಅಫಜಲಪೂರ ಕ್ಷೇತ್ರದ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ನಿತೀನ್ ಗುತ್ತೇದಾರ್ ಚುನಾವಣಾ ಕಣಕ್ಕಿಳಿದಿರುವುದು ಚುನಾವಣಾ ಲೆಕ್ಕಾಚಾರವನ್ನು ತೆಲೆ ಕೆಳಗೆ ಮಾಡುವ ಸಾಧ್ಯತೆಗಳಿವೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಮಾಲೀಕಯ್ಯಾ ಗುತ್ತೇದಾರ್ ಅವರು ಇದು ನನ್ನ ಕೊನೆ ಚುನಾವಣೆ ಮುಂದೆ ನನ್ನ ಸಹೋದರ ನೀತಿನ್ ಗುತ್ತೇದಾರ್ ಅವರಿಗೆ ಕ್ಷೇತ್ರ ಬಿಟ್ಟುಕೊಡುವುದಾಗಿ ತಮ್ಮನಿಗೆ ಮಾತು ಕೊಟ್ಟಿದ್ದರಂತೆ. ಆದರೆ ಅಣ್ಣ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂಬ ಕಾರಣವನ್ನು ನೀಡಿ ಸ್ವತಃ ಅಣ್ಣ ವಿರುದ್ಧವೆ ತಮ್ಮ ತೊಡೆ ತಟ್ಟಿ ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ. ಕಲಬುರಗಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು ಆಗಿರುವ ನಿತೀನ್ ಗುತ್ತೇದಾರ್ ಅವರು ಹಾಗೂ ಅವರ ಸಹೋದರರೆಲ್ಲರೂ ಕೂಡಿಕೊಂಡು ಈ ಹಿಂದೆ ಅವರ ಅಣ್ಣ ಮಾಲೀಕಯ್ಯಾ ಗುತ್ತೇದಾರ್ ಅವರ ಚುನಾವಣೆಗಳನ್ನು ಮಾಡುತ್ತಿದ್ದರು. ಸಹೋದರರು ಹೇಳಿದ ಕಡೆಗೆ ಹೋಗಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಬರುವ ಮೂಲಕ 6ಬಾರಿ ಮಾಲೀಕಯ್ಯ ಗುತ್ತೇದಾರ್ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಬಾರಿ ಸ್ವತಃ ತಮ್ಮನೆ ಅವರ ವಿರುದ್ಧ ಪಕ್ಷೇತರವಾಗಿ ಕಣಕ್ಕಿಳದಿರುವುದು ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಎಂ.ವೈ.ಪಾಟೀಲ್ ಅವರು ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಎಂ.ವೈ.ಪಾಟೀಲ್ ಅವರು ತಮಗೆ ವಯಸ್ಸಾಗಿರುವ ಕಾರಣ ಈ ಬಾರಿ ನನಗೆ ಬೇಡ ನನ್ನ ಪುತ್ರ ಅರುಣಕುಮಾರ್ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡನಲ್ಲಿ ಮನವಿ ಮಾಡಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಪೈಪೋಟಿ ಇರುವ ಕಾರಣ ಕಾಂಗ್ರೆಸ್ ಹೈಕಮಾಂಡ ಈ ಬಾರಿಯು ಎಂ.ವೈ.ಪಾಟೀಲ್ ಅವರಿಗೆ ಟಿಕೆಟ್ ಘೊಷಣೆ ಮಾಡಿತು. ಪ್ರಾರಂಭದಲ್ಲಿ ಕಾಂಗ್ರೆಸ್ ನಲ್ಲಿ ಬಂಡಾಯ ಕಾಣಿಸಿಕೊಂಡಿತ್ತು. ಆದರೆ ಈಗ ಬಂಡಾಯ ಶಮನವಾಗಿರುವ ಕಾರಣ ಎಂ.ವೈ.ಪಾಟೀಲ್ ಈ ಬಾರಿ ಗುತ್ತೇದಾರ ಕುಟುಂಬದ ಅಣ್ಣ-ತಮ್ಮನ ಜಿದ್ದಾ ಜಿದ್ದಿನ ನಡುವೆ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಕ್ಷೇತ್ರದ ಮತದಾರರು ಈ ಇಬ್ಬರು ಹಳೆ ತಲೆಗಳನ್ನು ಸೋಲಿಸಿ, ಯುವ ನಾಯಕ ನಿತೀನ್ ಗುತ್ತೇದಾರ್ ಅವರನ್ನು ಗೆಲ್ಲಿಸಿದರೂ ಅಚ್ಚರಿ ಪಡಬೇಕಿಲ್ಲ. 

ಜೇವರ್ಗಿ ಮತಕ್ಷೇತ್ರದ ಪರಿಚಯ:- 
- ಕಾಂಗ್ರೆಸ್‌ ಪಕ್ಷದ ಭದ್ರಕೋಟೆ
- ಮಾಜಿ ಸಿಎಂ ಧರ್ಮಸಿಂಗ್‌ ಕ್ಷೇತ್ರ
- 2008ರಲ್ಲಿ ಮೊದಲಿಗೆ ಬಿಜೆಪಿ ಗೆಲುವು
- ಹಾಲಿ ಶಾಸಕ ಡಾ. ಅಜಯ್‌ಸಿಂಗ್‌
- ಮತ್ತೆ ಡಾ.ಅಜಯ್‌ ಸಿಂಗ್‌ v/s ದೊಡ್ಡಪ್ಪಗೌಡ ನರಿಬೋಳ

ಜೇವರ್ಗಿ ವಿಧಾನಸಭೆ ಕ್ಷೇತ್ರ ಕಾಂಗ್ರೇಸ್ನ ಭದ್ರ ಕೋಟೆ. ಈ ಕ್ಷೇತ್ರದಿಂದ 1972 ರಿಂದ ಕಾಂಗ್ರೇಸ್ ನಿಂದ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ 8 ಬಾರಿ ಆಯ್ಕೆಯಾಗಿದ್ದಾರೆ. ಕಳೆದ 2008ರಲ್ಲಿ ಮೊದಲ ಬಾರಿಗೆ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಅವರು ಈ ಕ್ಷೇತ್ರದಲ್ಲಿ ಕೆಲವೇ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013 ಹಾಗೂ 2018 ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ದಿ, ಧರ್ಮಸಿಂಗ್ ಅವರ ಪುತ್ರ ಡಾ. ಅಜಯಸಿಂಗ್ ಗೆಲುವು ಸಾಧಸಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಬಾರಿಸು ಚುನಾವಣಾ ಕಣವನ್ನು ಸಿದ್ದ ಮಾಡಿಕೊಂಡಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಅವರು 68508 ಮಗಳನ್ನು ಪಡೆದು ಗೆಲುವು ಸಾಧಸಿದರೆ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು, 52,452 ಮತಗಳನ್ನು ಪಡೆದು ಸೋತಿದ್ದರು. ಗೆಲುವಿನ ಅಂತರ..16,056 
 
ಜೇವರ್ಗಿ ಮತ ಕ್ಷೇತ್ರದ ಜಾತಿ ಲೆಕ್ಕ : 
ಒಟ್ಟು ಮತದಾರರು -235038
ಪುರುಷ -119248  ಮಹಿಳೆ - 115790
ಲಿಂಗಾಯತ -40000
ಗಾಣಿಗ ಲಿಂಗಾಯತ- 30000
ಬ್ರಾಹ್ಮಣ -5000
ಕೊಲಿ ಕಬ್ಬಲಿಗ -32000
ಮುಸ್ಲಿಂ -30000
ಕುರುಬ - 35000
ಎಸ್‌ಸಿ & ಎಸ್‌ಟಿ  -45000
ಇತರೆ -3038

ಈ ಬಾರಿಯೂ ಕಾಂಗ್ರೇಸ್ ನಿಂದ ಡಾ. ಅಜಯಸಿಂಗ್, ಬಿಜೆಪಿಯಿಂದ ಶಿವರಾಜ ಪಾಟೀಲ್ ರದ್ದೇವಾಡಗಿ, ಜೆಡಿಎಸ್ ನಿಂದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸೇರಿದಂತೆ 15 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಚುನಾವಣೆ ಘೊಷಣೆಗೂ ಮುಂಚೆ ಶಾಸಕ ಡಾ, ಅಜಯಸಿಂಗ್ ಅವರು ಎಲ್ಲ ರೀತಿಯಲ್ಲಿ ಚುನಾವಣಾ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಈ ಹಿಂದೆ ಜೇವರ್ಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಳೆದ 2018ರಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಮತಳನ್ನು ಪಡೆದಿರುವ ಕೇದಾರಲಿಂಗಯ್ಯ ಹಿರೇಮಠ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಳ್ಳುವ ಮೂಲಕ ಚುನಾವಣೆಯ ರಣತಂತ್ರವನ್ನು ರೂಪಿಸಿದ್ದರು. ಆದರೆ ಬಿಜೆಪಿ ಟಿಕೆಟ್ ಘೊಷಣೆಯಾದ ನಂತರ ಚುನಾವಣಾ ಕಣ ಬದಲಾಗಿದೆ. ಬಿಜೆಪಿಯಿಂದ ಶಿವರಾಜ ಪಾಟೀಲ್ ರದ್ದೇವಾಡಗಿಗೆ ಟಿಕೇಟ್ ಘೊಷಣೆಯಾದ ನಂತರ ತಮ್ಮ ಬೆಂಬಲಿಗರ ಸಭೆ ನಡೆಸಿದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಜೆಡಿಎಸ್ ಟಿಕೇಟ್ ಪಡೆಯುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸೆಡ್ಡು ಹೊಡೆದಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಫೈಟ್ ನಡೆಯಲಿದೆ ಎಂದೇ ಹೇಳಲಾಗುತ್ತಿದೆ. ಆದರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇರುವುದು ಖಚಿತ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಡಾ. ಅಜಯಸಿಂಗ್ ಅವರು ಅವರ ತಂದೆಯ ಹಾಗೆ ವಿರೋಧಿ ಅಲೆಯನ್ನು ತಣ್ಣಗೆ ಮಾಡುವ ಮೂಲಕ ಕ್ಷೇತ್ರದಲ್ಲಿ ತಮ್ಮ ಪರವಾದ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮತಗಳ ಹಂಚಿಕೆಯಿಂದ ಮತ್ತೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಸಾಧ್ಯತೆಗಳಿವೆ. ಸದಸ್ಯದ ಮಟ್ಟಿಗೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 

* ಸೇಡಂ ವಿಧಾನಸಭಾ ಕ್ಷೇತ್ರದ ಪರಿಚಯ: 
- ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು
- 2018ರಲ್ಲಿ ಬಿ‌ಜೆ‌ಪಿಯ ರಾಜಕುಮಾರ್‌ ತೇಲ್ಕೂರ್‌ ಈ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ.  
- ಮತ್ತೆ ಈ ಸಲವೂ ಹಳೆ ಎದುರಾಳಿಗಳೇ ಮುಖಾಮುಖಿ
- ಜೆ‌ಡಿ‌ಎಸ್ ಬಾಲರಾಜ ಗುತ್ತೇದಾರ್‌, ಕೆ‌ಆರ್‌ಪಿ‌ಪಿ ಲಲ್ಲೇಶ್ ರೆಡ್ಡಿ ಸ್ಪರ್ಧೆ

ಸೇಡಂ ವಿಧಾನಸಭಾ ಕ್ಷೇತ್ರ ಈ ಹಿಂದೆ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಯ ರಾಜಕುಮಾರ ಪಾಟೀಲ್ ತೇಲ್ಕೂರ್ ಈ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಾ. ಶರಣಪ್ರಕಾಶ ಪಾಟೀಲ್ ಅವರನ್ನು ಸೋಲಿಸಿದ್ದರು. ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಶ್ರೀರಕ್ಷೆಯನ್ನು ಹೊಂದಿರುವ ಡಾ. ಶರಣ ಪ್ರಕಾಶ ಪಾಟೀಲ್ ನಿರಂತರವಾಗಿ ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಆದರೆ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಯ ರಾಜಕುಮಾರ ಪಾಟೀಲ್ ತೇಲ್ಕೂರ್ ವಿರುದ್ಧ ಸೋಲಬೇಕಾಯಿತು. ಕಳೆದ 2018ರ ಚುನಾವಣೆಯಲ್ಲಿ ಗೆದ್ದಿರುವ ರಾಜುಕುಮಾರ ಪಾಟೀಲ್ ತೇಲ್ಕೂರ್ 80668 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಡಾ. ಶರಣ ಪ್ರಕಾಶ ಪಾಟೀಲ್ ಅವರು, 73468 ಮತಗಳನ್ನು ಪಡೆದು ಸೋತಿದ್ದರು. ಗೆಲುವಿನ ಅಂತರ. 7200 

ಒಟ್ಟು ಮತದಾರರು -218698
ಪುರುಷ - 108006
ಮಹಿಳೆ - 110692
ಜಾತಿವಾರು
ಲಿಂಗಾಯತ -45000
ರೆಡ್ಡಿ ಲಿಂಗಾಯತ -30000
ಬ್ರಾಹ್ಮಣ -7000
ಕೊಲಿ-ಕಬ್ಬಲಿಗ -30000
ಲಂಬಾಣಿ - 20000
ಮುಸ್ಲಿಂ -22000
ಕುರುಬ -20000
ಎಸ್‌ಸಿ & ಎಸ್‌ಟಿ -35000
ಇತರೆ- 7698

ಈ ಬಾರಿ ಸೇಡಂ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಈ ಹಿಂದಿನಿಂದಲೂ ಇಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಪೈಟ್ ನಡೆಯುತ್ತಿತ್ತು. ಆದರೆ ಈ ಬಾರಿ ನಾಲ್ಕುಜನ ಪ್ರಭಲ ಅಭ್ಯರ್ಥಿಗಳ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಬಿಜೆಪಿಯಿಂದ ರಾಜಕುಮಾರ ಪಾಟೀಲ್ ತೇಲ್ಕೂರ್, ಕಾಂಗ್ರೆಸ್ ಪಕ್ಷದಿಂದ ಡಾ. ಶರಣಪ್ರಕಾಶ ಪಾಟೀಲ್ ತೇಲ್ಕೂರ್, ಜೆಡಿಎಸ್ ನಿಂದ ಬಾಲರಾಜ ಗುತ್ತೇದಾರ್ ಹಾಗೂ ಕೆಆರ್.ಪಿ.ಪಿ ಪಕ್ಷದಿಂದ ಗಾಲಿ ಲಲ್ಲೇಶ್ ರೆಡ್ಡಿ ಸೇರಿದಂತೆ 12ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.  ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಬಿಜೆಪಿ ಪ್ಲ್ಯಾನ್ ರೂಪಿಸಿತ್ತು. ಅದರಂತೆ ಬಿಜೆಪಿಯ ಮಾಲೀಕಯ್ಯ ಗುತ್ತೇದಾರ್ ಅವರ ಸಂಬಂಧಿ ಬಾಲರಾಜ ಗುತ್ತೇದಾರ್ ಅವರನ್ನು ಜೆಡಿಎಸ್ ಗೆ ಕರೆತಂದು ಸೇಡಂ ಕ್ಷೇತ್ರದಿಂದ ಕಣಕ್ಕಿಳಿಸಿ ಕಾಂಗ್ರೆಸ್ ಮತ ಬ್ಯಾಂಕಿಗೆ ಲಗ್ಗೆ ಹಾಕುವ ಮೂಲಕ ಬಿಜೆಪಿಗೆ ಸಹಾಯವಾಗು ನಿಟ್ಟಿನಲ್ಲಿ ಬ್ಲೂವ್ ಪ್ರಿಂಟ್ ರೆಡಿಯಾಗಿತ್ತು. ಆದರೆ ಕ್ಷೇತ್ರದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಲ್ಲೇಶ ರೆಡ್ಡಿ ಏಕಾ ಏಕಿ ಲಗ್ಗೆ ಇಟ್ಟ ಕಾರಣ ಇಲ್ಲಿ ಎಲ್ಲರಿಗೂ ಗೆಲುವು ಕಬ್ಬಿಣದ ಕಡಲೆಯಾಗಿದೆ. ಕ್ಷೇತ್ರದಲ್ಲಿ ನನ್ನದೆ ಗೆಲುವು ಎಂದು ಬೀಗುತ್ತಿದ್ದ ಯಾರ ಮುಖದಲ್ಲಿಯೂ ಈಗ ಗೆಲುವಿನ ಚಾರ್ಮ್ ಕಾಣುತ್ತಿಲ್ಲ. ಇಲ್ಲಿ ಯಾರು ಗೆದ್ದರೂ ಗೆಲುವಿನ ಅಂತರ ಬಹಳ ಕಡಿಮೆ ಪ್ರಮಾಣದಲ್ಲಿ ಇರಲಿದೆ ಎಂಬ ಅಭಿಪ್ರಾಯ ಕ್ಷೇತ್ರದೆಲ್ಲೆಡೆ ಕೇಳಿ ಬರುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News