ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿಯ ಸಾಕೆತ್ ನ್ಯಾಯಾಲಯ ಸೋಮವಾರ ಬಿಹಾರದ ಮುಜಫ್ಫರ್ ಪುರ್ ನಲ್ಲಿ ನಡೆದ ಯುವತಿಯರ ಲೈಂಗಿಕ ಕಿರುಕುಳ ಹಾಗೂ ಶಾರೀರಿಕ ಹಿಂಸಾಚಾರ ಪ್ರಕರಣದ ತೀರ್ಪು ಪ್ರಕಟಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಪೀಠ, ಪ್ರಕರಣದ ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ಸೇರಿದಂತೆ ಒಟ್ಟು 19 ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ತೀರ್ಪು ನೀಡಿದೆ.
ಪ್ರಕರಣದ ಕುರಿತು ನೀಡಲಾಗಿರುವ 1546 ಪುಟಗಳ ತೀರ್ಪಿನಲ್ಲಿ ನ್ಯಾಯಾಲಯ ಪ್ರಕರಣದ ಒಟ್ಟು 20 ಆರೋಪಿಗಳ ಪೈಕಿ 19 ಆರೋಪಿಗಳನ್ನು ದೋಷಿಗಳು ಎಂದು ಪರಿಗಣಿಸಿದೆ. ಇದಕ್ಕೂ ಮೊದಲು ಪ್ರಕರಣದ ಕುರಿತು ಆರೋಪ ಪಟ್ಟಿ ದಾಖಲಿಸಿದ್ದ CBI ಎಲ್ಲ 20 ಜನರನ್ನು ಆರೋಪಿಗಳು ಎಂದು ಹೇಳಿತ್ತು.
ಈ ಪ್ರಕರಣದಲ್ಲಿ ಸಾಕ್ಷಾಧಾರಗಳ ಕೊರತೆಯ ಕಾರಣ ನ್ಯಾಯಪೀಠ ಓರ್ವನನ್ನು ಖುಲಾಸೆಗೊಳಿಸಿದೆ. ನ್ಯಾಯಾಲಯದ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಈ ತಿಂಗಳ 28ನೇ ತಾರೀಖಿಗೆ ಈ ಎಲ್ಲ ಆರೋಪಿಗಳ ಶಿಕ್ಷೆಯ ಕುರಿತು ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಪ್ರಕರಣದ ಮುಖ್ಯ ಆರೋಪಿಯಾಗಿರುವ ಬ್ರಜೇಶ್ ಠಾಕೂರ್ ನನ್ನು ರೇಪ್, ಗ್ಯಾಂಗ್ ರೇಪ್, ಜ್ಯುವೆನೈಲ್ ಜಸ್ಟಿಸ್ ಆಕ್ಟ್ ಹಾಗೂ ಇತರೆ ಕಾನೂನುಗಳ ಅಡಿ ದೋಷಿ ಎಂದು ಪರಿಗಣಿಸಿ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
ನ್ಯಾಯಾಲಯ ಬ್ರಜೇಶ್ ಠಾಕೂರ್, ಬಾಲಕಿಯರ ವಸತಿ ಗೃಹದ ಅಧೀಕ್ಷಕರಾಗಿರುವ ಇಂದು ಕುಮಾರಿ, ಗೃಹ ಮಾತಾ ಮೀನುದೇವಿ, ಚಂದಾದೇವಿ, ಕೌನ್ಸಲರ್ ಮಂಜುದೇವಿ, ನರ್ಸ್ ನೇಹಾ ಕುಮಾರಿ ಹಾಗೂ ಕೇಸ್ ವರ್ಕರ್ ಹೇಮಾ ಮಸೀಹ್ ಅವರನ್ನು 120 ಬಿ ಅನ್ವಯ ದೋಷಿಗಳು ಎಂದು ತೀರ್ಪು ನೀಡಿದೆ. ಇನ್ನೊಂದೆಡೆ ಈ ಪ್ರಕರಣದ 20ನೇ ಆರೋಪಿಯಾಗಿದ್ದ ವಿಕ್ಕಿ ಅವನನ್ನು ಸಾಕ್ಷಾಧಾರಗಳ ಕೊರತೆ ಅನ್ವಯ ಖುಲಾಸೆಗೊಳಿಸಿದೆ.