ಹೈದರಾಬಾದ್: ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಮತ್ತು ಬಿಜೆಪಿ ಜೊತೆ ಆತ್ಮಿಯರಾಗಬೇಡಿ ಎಂದು ಎಐಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಮುಸಲ್ಮಾನ ಸಮುದಾಯದವರಿಗೆ ಕರೆ ನೀಡಿದ್ದಾರೆ.
ಮೊಹರಂ ಅಂಗವಾಗಿ ಹೈದರಾಬಾದ್ನ ಯಾಕುತ್ಪುರದಲ್ಲಿ ನಡೆದ ಜಲ್ಸಾ ಯಾದ್-ಎ-ಹುಸೇನ್ ಕಾರ್ಯಕ್ರಮದಲ್ಲಿ ಶಿಯಾ ಮುಸ್ಲಿಮರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದರು.
"ಯಾವುದೇ ಕಾರಣಕ್ಕೂ ಮೋದಿಗೆ ಹಾಗೂ ಬಿಜೆಪಿಗೆ ಆತ್ಮಿಯರಾಗಬೇಡಿ" ಎಂದು ಇದೇ ಸಂದರ್ಭದಲ್ಲಿ ಒವೈಸಿ ಮುಸ್ಲಿಂ ಸಮುದಾಯದವರಿಗೆ ಎಚ್ಚರಿಕೆ ನೀಡಿದರು.
2019ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಶಿಯಾ ಮುಸ್ಲಿಂ ಸಮುದಾಯದ ಹಲವಾರು ಬಣಗಳು ಬಿಜೆಪಿಯನ್ನು ಬೆಂಬಲಿಸಿದ್ದವು. ಶಿಯಾ ಧರ್ಮಗುರು ಕಲ್ಬೆ ಜಾವದ್ ಅವರು ಮೋದಿ ಸರ್ಕಾರವನ್ನು "ಅಲ್ಪಸಂಖ್ಯಾತರನ್ನು ತಲುಪಿದ್ದಾರೆ" ಎಂದು ಶ್ಲಾಘಿಸಿದ್ದರಲ್ಲದೆ, ಮುಸ್ಲಿಮರು ಮೋದಿ ಆಡಳಿತದಲ್ಲಿ ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದರು.