ಕೊಲ್ಕತ್ತಾ: ಕಳೆದ ವಾರ 23ನೇಯ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಲು ಕೊಲ್ಕತ್ತಾ ಗೆ ಆಗಮಿಸಿದ್ದ ಅಮಿತಾಬ್ ಬಚ್ಚನ್ ವಿಮಾನ ನಿಲ್ದಾಣಕ್ಕೆ ವಾಪಾಸ್ಸಾಗುವ ಸಂದರ್ಭದಲ್ಲಿ ಅವರು ಸಾಗುತ್ತಿದ್ದ ಮರ್ಸಿಡೆಸ್ ಕಾರಿನ ಗಾಲಿಯು ಬೇರ್ಪಟ್ಟು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಟ್ರಾವೆಲ್ ಏಜನ್ಸಿಯನ್ನು ಪ್ರಚಾರಪಡಿಸಲು ನೀಡಿದ್ದ ಕಾರು ಇದಾಗಿದ್ದು, ಶನಿವಾರದಂದು ನಗರದ ಡಫಾರೀನ್ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೊರಟಾಗ ಈ ಘಟನೆಯು ಜರುಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾವೆಲ್ ಏಜನ್ಸಿಯ ದಕ್ಷತಾ ಸರ್ಟಿಫಿಕೇಟ್ ಈ ಹಿಂದೆಯೇ ಮುಗಿದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಒಂದು ವೇಳೆ ಅದು ಏಜನ್ಸಿ ಕಾರಿನಲ್ಲಿಯೇ ದೋಷವೆಂದು ತಿಳಿದು ಬಂದರೆ ಸರ್ಕಾರ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ಈ ಘಟನೆಯ ಬಳಿಕ ಸಚಿವರೊಬ್ಬರ ಕಾರಿನ ಮೂಲಕ ಅಮಿತಾಬ್ ಬಚ್ಚನ್ ಅವರನ್ನು ವಿಮಾನನಿಲ್ದಾಣಕ್ಕೆ ತಲುಪಿಸಲಾಯಿತು ಎಂದು ವರದಿಗಳು ತಿಳಿಸಿವೆ.